ಬೆಂಗಳೂರು: ಸಾಲದ ಹಣ ಹಾಗೂ ಬಡ್ಡಿ ವಿಚಾರಕ್ಕೆ ಮಹಿಳೆಯೊಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿ, ಆಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಚಂದ್ರಾಲೇಔಟ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ರೇಷ್ಮಾ ಬಾನು, ನಝತ್ ಹಾಗೂ ಸುಹೇಲ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಾಲದ ಹಣ ಪಾವತಿಸದ ಹಿನ್ನೆಲೆ ತಕರಾರು:
ಪೊಲೀಸರ ದೂರಿನ ಪ್ರಕಾರ, ಸಂತ್ರಸ್ತ ಮಹಿಳೆಗೆ ರೇಷ್ಮಾ ಬಾನು ಈ ಹಿಂದೆ ಪರಿಚಯವಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ರೇಷ್ಮಾ ಅವರಿಂದ ಮಹಿಳೆ ₹1 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಬಳಿಕ ರೇಷ್ಮಾ ಮೂಲಕ ನಝತ್ ಪರಿಚಯವಾಗಿದ್ದು, ನಝತ್ ಅವರಿಂದ ₹50 ಸಾವಿರ ಸಾಲ ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಝತ್ಗೆ ಪ್ರತಿ ತಿಂಗಳು ₹5 ಸಾವಿರದಂತೆ ಕಂತಿನಲ್ಲಿ ಹಣ ಪಾವತಿಸುತ್ತಿದ್ದ ಮಹಿಳೆಗೆ ವೈಯಕ್ತಿಕ ಕಾರಣಗಳಿಂದ ಕಳೆದ ಆರು ತಿಂಗಳಿಂದ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನಝತ್ ಪದೇಪದೆ ಸಂಪರ್ಕಿಸುತ್ತಿದ್ದರು. ಇದರಿಂದಾಗಿ ಮಹಿಳೆ ನಝತ್ ಅವರ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸದ ನೆಪದಲ್ಲಿ ಮನೆಗೆ ಕರೆಸಿ ಹಲ್ಲೆ:
ಮಹಿಳೆ ಮನೆ ಖಾಲಿ ಮಾಡಿಕೊಂಡು ತಾಯಿಯ ಮನೆಗೆ ತೆರಳಿದ್ದ ಸಂದರ್ಭದಲ್ಲಿ, ಕೆಲಸವೊಂದಿದೆ ಹಾಗೂ ಹಣ ಸಿಗಲಿದೆ ಎಂದು ಹೇಳಿ ನಝತ್ ತಮ್ಮ ಮನೆಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ. ಮಹಿಳೆ ಅಲ್ಲಿಗೆ ತೆರಳಿದ ಬಳಿಕ ಆಕೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ ರೇಷ್ಮಾ ಬಾನು ಹಾಗೂ ಆಕೆಯ ಪತಿ ಸುಹೇಲ್ ಕೂಡ ಅಲ್ಲಿಗೆ ಬಂದು ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಚಾಕುವಿನಿಂದ ಹಲ್ಲೆ ನಡೆಸಿದ ಬಳಿಕ ಮಹಿಳೆಯನ್ನು ಆಟೋದಲ್ಲಿ ಕುಂಬಳಗೋಡು ಸಮೀಪದ ಮನೆಯೊಂದಕ್ಕೆ ಕರೆದೊಯ್ದು ಇರಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಡಿಯೋ ಹರಿಬಿಡುವುದಾಗಿ ಬೆದರಿಕೆ:
ಮಹಿಳೆಯನ್ನು ಮನೆಯಲ್ಲಿ ಇರಿಸಿಕೊಂಡಿದ್ದ ವೇಳೆ ಆಕೆಯನ್ನು ಅವಮಾನಿಸಿ ವಿಡಿಯೋ ಮಾಡಲಾಗಿತ್ತು. ಹಣ ನೀಡದಿದ್ದರೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ.
ಈ ನಡುವೆ ಮಹಿಳೆ ಕಾಣೆಯಾಗಿದ್ದರಿಂದ ಆಕೆಯ ತಾಯಿ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಮಹಿಳೆಯನ್ನು ಪತ್ತೆಹಚ್ಚಿ ರಕ್ಷಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೇಷ್ಮಾ ಬಾನು, ನಝತ್ ಹಾಗೂ ಸುಹೇಲ್ ಅವರನ್ನು ಬಂಧಿಸಿರುವ ಪೊಲೀಸರು, ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.



