ಬೆಂಗಳೂರು: ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಕೋಳಿ ತ್ಯಾಜ್ಯ ವಿಲೇವಾರಿಗೆ ಪ್ರತಿ ಕೆಜಿಗೆ ₹5 ಶುಲ್ಕ ವಿಧಿಸುವ ನಿರ್ಧಾರಕ್ಕೆ ಕೋಳಿ ಮಾಂಸ ಮತ್ತು ಮೊಟ್ಟೆ ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದ್ದು, GBA-BSWML ವಿರುದ್ಧ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕೋಳಿ ತ್ಯಾಜ್ಯವನ್ನು ವ್ಯಾಪಾರಸ್ಥರಿಂದ ಹಣ ಪಡೆದು ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿತ್ತು. ಇದೀಗ ಏಕಾಏಕಿ ತ್ಯಾಜ್ಯ ವಿಲೇವಾರಿಗೆ ವ್ಯಾಪಾರಿಗಳೇ ಪ್ರತಿ ಕೆಜಿಗೆ ₹5 ಶುಲ್ಕ ಪಾವತಿಸಬೇಕು ಎಂದು ಸೂಚಿಸಿರುವುದು ಅವೈಜ್ಞಾನಿಕ ಹಾಗೂ ಅನ್ಯಾಯದ ಕ್ರಮ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.
ಹೆಚ್ಚುವರಿ ಶುಲ್ಕ ವಿಧಿಸಿದರೆ ಈಗಾಗಲೇ ವಿವಿಧ ವೆಚ್ಚಗಳ ನಡುವೆ ವ್ಯಾಪಾರ ನಡೆಸುತ್ತಿರುವವರಿಗೆ ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ. ಈ ಶುಲ್ಕದ ಹೊರೆಯನ್ನು ಅಂತಿಮವಾಗಿ ಗ್ರಾಹಕರ ಮೇಲೆಯೇ ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ವ್ಯಾಪಾರಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
‘ಯಾವುದೇ ಕಾರಣಕ್ಕೂ ನಾವು ಶುಲ್ಕ ಪಾವತಿಸುವುದಿಲ್ಲ’ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ದು, ತಕ್ಷಣ ಶುಲ್ಕ ವಿಧಿಸುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಕೋಳಿ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ಕಲ್ಪಿಸಬೇಕು. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ವ್ಯಾಪಾರಸ್ಥರ ಸಮಸ್ಯೆ ಬಗೆಹರಿಸಬೇಕು ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಒತ್ತಾಯಿಸಿದೆ.



