ಬೆಂಗಳೂರು: ನಗರದ ಐತಿಹಾಸಿಕ ಕೆ.ಆರ್. ಮಾರುಕಟ್ಟೆಯ ಅಭಿವೃದ್ಧಿ ಮತ್ತು ನಿರ್ವಹಣೆಗೆ ಹೊಸ ಶುಲ್ಕ ವ್ಯವಸ್ಥೆ ಜಾರಿಗೆ ತರಲು ಬೆಂಗಳೂರು ಕೇಂದ್ರ ನಗರ ಪಾಲಿಕೆ ಮುಂದಾಗಿದೆ.
ಇದರ ಭಾಗವಾಗಿ ಮಾರುಕಟ್ಟೆ ಪ್ರವೇಶಿಸುವ ಸರಕು ಸಾಗಣೆ ವಾಹನಗಳು ಹಾಗೂ ವಿವಿಧ ಸರಕುಗಳ ಮೇಲೆ ಪ್ರವೇಶ ಶುಲ್ಕ ವಿಧಿಸಲು ಸ್ಮಾರ್ಟ್ ಗೇಟ್ ವ್ಯವಸ್ಥೆ ಅಳವಡಿಸಲಾಗುತ್ತಿದೆ.
ನಿಗದಿತ ದರದ ಪ್ರಕಾರ, ಆರು ಚಕ್ರ ಅಥವಾ ಅದಕ್ಕಿಂತ ಹೆಚ್ಚಿನ ಸರಕು ವಾಹನಗಳಿಗೆ ಪ್ರತಿ ಪ್ರವೇಶ ಮತ್ತು ನಿರ್ಗಮನಕ್ಕೆ ₹350, ನಾಲ್ಕು ಚಕ್ರದ ಸರಕು ವಾಹನಗಳಿಗೆ ₹100 ಹಾಗೂ ಮೂರು ಚಕ್ರದ ಸರಕು ವಾಹನಗಳಿಗೆ ₹75 ಶುಲ್ಕ ವಿಧಿಸಲಾಗುತ್ತದೆ.
ತರಕಾರಿ, ಹಣ್ಣು, ಹೂವಿಗೂ ಶುಲ್ಕ:
ವಾಹನಗಳ ಪ್ರವೇಶ ಶುಲ್ಕದ ಜತೆಗೆ ಮಾರುಕಟ್ಟೆಗೆ ತರಲಾಗುವ ಸರಕುಗಳಿಗೂ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ. ತರಕಾರಿ, ಹಣ್ಣು, ಹೂವು, ಸೊಪ್ಪು ಸೇರಿದಂತೆ ಹಲವು ಕೃಷಿ ಉತ್ಪನ್ನಗಳಿಗೆ ಪ್ರತಿ ಮೂಟೆ ಅಥವಾ ನಿಗದಿತ ಘಟಕಕ್ಕೆ ₹5 ಶುಲ್ಕ ವಿಧಿಸಲಾಗುತ್ತದೆ.
ಮೊಟ್ಟೆಗಳಿಗೆ ಪ್ರತಿ ಬಾಕ್ಸ್‌ಗೆ ₹10, ಮೀನು ಹಾಗೂ ಸಮುದ್ರ ಉತ್ಪನ್ನಗಳ ಬಾಕ್ಸ್‌ಗೆ ₹10 ಮತ್ತು ಕೋಳಿ ಹಾಗೂ ಇತರ ಮಾಂಸ ಉತ್ಪನ್ನಗಳ ಪ್ರತಿ ಟ್ರೇಗೆ ₹10 ಶುಲ್ಕ ನಿಗದಿಪಡಿಸಲಾಗಿದೆ.
ಡಿಜಿಟಲ್ ಮೂಲಕ ಶುಲ್ಕ ಪಾವತಿ:
ಮಾರುಕಟ್ಟೆ ಪ್ರವೇಶಕ್ಕೂ ಮುನ್ನ ನಿಗದಿತ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಯುಪಿಐ, ಕ್ಯೂಆರ್ ಕೋಡ್, ಫಾಸ್ಟ್‌ಟ್ಯಾಗ್, ಕಾರ್ಡ್ ಹಾಗೂ ಪಿಒಎಸ್ ಸೇರಿದಂತೆ ಡಿಜಿಟಲ್ ವಿಧಾನಗಳ ಮೂಲಕ ಶುಲ್ಕ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಸ್ಮಾರ್ಟ್ ಗೇಟ್‌ಗಳ ಜತೆಗೆ ವಾಹನಗಳ ಮೇಲ್ವಿಚಾರಣೆಗೆ ಎಎನ್‌ಪಿಆರ್ ಕ್ಯಾಮೆರಾ ಹಾಗೂ ಸಿಸಿಟಿವಿ ವ್ಯವಸ್ಥೆಯನ್ನೂ ಬಳಸುವ ಯೋಜನೆ ಇದೆ.
10 ವರ್ಷಗಳ ಒಪ್ಪಂದ:
ಕೆ.ಆರ್. ಮಾರುಕಟ್ಟೆಯ ಅಭಿವೃದ್ಧಿ, ನಿರ್ವಹಣೆ, ಸಿವಿಲ್ ಕಾಮಗಾರಿ, ಸ್ಮಾರ್ಟ್ ತಂತ್ರಜ್ಞಾನ ಅಳವಡಿಕೆ ಹಾಗೂ ಸರಕು ವಾಹನಗಳಿಂದ ಪ್ರವೇಶ ಶುಲ್ಕ ಸಂಗ್ರಹಿಸುವ ಕಾರ್ಯವನ್ನು 10 ವರ್ಷಗಳ ಅವಧಿಯ ಒಪ್ಪಂದದಡಿ ಕೈಗೊಳ್ಳಲು ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ.
ಹೊಸ ಶುಲ್ಕ ವ್ಯವಸ್ಥೆಯಿಂದ ಮಾರುಕಟ್ಟೆಯ ನಿರ್ವಹಣೆ ಹಾಗೂ ಸ್ವಚ್ಛತೆ ಸುಧಾರಿಸುವ ಉದ್ದೇಶವಿದೆ ಎಂದು ಪಾಲಿಕೆ ತಿಳಿಸಿದೆ. ಆದರೆ ಹೆಚ್ಚುವರಿ ಶುಲ್ಕದ ಹೊರೆ ಅಂತಿಮವಾಗಿ ಸರಕುಗಳ ಬೆಲೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರಲ್ಲಿ ಆತಂಕವೂ ವ್ಯಕ್ತವಾಗುತ್ತಿದೆ.



