ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸಂಸ್ಕೃತಿಯ ಮೌಲ್ಯಗಳು ಜಗತ್ತಿಗೇ ಮಾದರಿಯಾಗಿದ್ದು, ಮಕ್ಕಳು ಬಾಲ್ಯದಲ್ಲಿಯೇ ಹಿರಿಯರ ಮಾರ್ಗದರ್ಶನ ಪಡೆದು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂದು ಚಿಂತಕಿ ಸುರೇಖಾ ರಾಜಣ್ಣ ಮಲ್ಲಾಡದ ಹೇಳಿದರು.
ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. ೧೩ರಲ್ಲಿ ಗದಗ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ‘ಅಮೃತ ಭೋಜನ-ಜ್ಞಾನ ಸಿಂಚನ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಿಹಿ ಭೋಜನ ಹಾಗೂ ಕಲಿಕಾ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.
ಮಕ್ಕಳು ಕೇವಲ ಪಠ್ಯಾಭ್ಯಾಸಕ್ಕೆ ಸೀಮಿತವಾಗದೆ ಶರಣರ ನುಡಿಗಳು, ಅನುಭವಿಗಳ ನುಡಿಮುತ್ತುಗಳು ಹಾಗೂ ಮಹಾನ್ ಸಾಧಕರ ಜೀವನ ಚರಿತ್ರೆಗಳನ್ನು ಓದಿ ತಿಳಿಯಬೇಕು. ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ತಾವೂ ಸಾಧಕರಾಗಬೇಕು ಎಂದು ಸುರೇಖಾ ಮಲ್ಲಾಡದ ಕರೆ ನೀಡಿದರು.
ನಿವೃತ್ತ ಪ್ರಾಚಾರ್ಯ ವೈ.ಎಸ್. ಕೊಂಡಿ ಮಾತನಾಡಿ, ಬಾಲ್ಯದಲ್ಲಿ ಕಲಿತ ವಿಚಾರಗಳು ಜೀವನದುದ್ದಕ್ಕೂ ಉಳಿಯುವುದರಿಂದ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಬಾಲ್ಯದ ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ ಎಂದರು. ಈ ಹಂತದಲ್ಲಿಯೇ ಉತ್ತಮ ಹಾಗೂ ಮೌಲ್ಯಾಧಾರಿತ ಗುಣಗಳನ್ನು ಬೆಳೆಸಿಕೊಂಡು ಹಿರಿಯರಿಗೆ ಗೌರವ ನೀಡಬೇಕು ಎಂದು ಸಲಹೆ ನೀಡಿದರು.
ಅತಿಥಿ ಪಿ.ಎಸ್. ರೋಣದ ಮಾತನಾಡಿ, ಭಾರತೀಯ ಸಂಸ್ಕೃತಿ ಕೇವಲ ಉಡುಗೆ-ತೊಡುಗೆ ಮತ್ತು ಹಬ್ಬ-ಹರಿದಿನಗಳಿಗೆ ಸೀಮಿತವಾಗಿಲ್ಲ. ಪ್ರೀತಿ, ಗೌರವ, ಶಿಸ್ತು, ಸತ್ಯ, ಪ್ರಾಮಾಣಿಕತೆ ಹಾಗೂ ಪರಸ್ಪರ ಸಹಕಾರದಂತಹ ಜೀವನ ಮೌಲ್ಯಗಳೇ ನಮ್ಮ ಸಂಸ್ಕೃತಿಯ ನಿಜವಾದ ಶಕ್ತಿಯಾಗಿವೆ ಎಂದರು.
ವೇದಿಕೆಯ ಸಂಚಾಲಕಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ವೈವಿಧ್ಯತೆಯಲ್ಲಿನ ಏಕತೆಯೇ ಭಾರತೀಯ ಸಂಸ್ಕೃತಿಯ ಪ್ರಮುಖ ವೈಶಿಷ್ಟ್ಯವಾಗಿದೆ. ಆಧುನಿಕ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಅರಿವು ಮಕ್ಕಳಲ್ಲಿ ಮೂಡಿಸುವುದು ಅಗತ್ಯ ಎಂದರು.
ವೇದಿಕೆಯ ಮೇಲೆ ಜ್ಯೋತಿ ಉಮನಾಬಾದಿ, ನಂದೀಶ ಮಲ್ಲಾಡದ ಹಾಗೂ ಸ್ಮೀತಾ ಉಮನಾಬಾದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಗೌತಮಿ ವಸಂತ ಪಡಗದ ಅವರ ಹುಟ್ಟುಹಬ್ಬದ ಅಂಗವಾಗಿ ಶುಭ ಹಾರೈಸಲಾಯಿತು.
ವಿದ್ಯಾರ್ಥಿಗಳಾದ ರೇವತಿ ಪೂಜಾರ, ಕೌಶಲ್ಯ ಗಡ್ಡದ, ಚೈತ್ರಾ ಮೆಣಸಗಿ, ರೇಣುಕಾ ಜಾಲವಾಡಗಿ ಹಾಗೂ ಪುಟ್ಟರಾಜ ವಚನ ಪ್ರಾರ್ಥನೆ ಸಲ್ಲಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸುಧಾ ಬೇವಿನಮಟ್ಟಿ ಸ್ವಾಗತಿಸಿ ನಿರೂಪಿಸಿದರು. ಶಾರದಾ ಅಂಗಡಿ ವಂದಿಸಿದರು.



