ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಬಟ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎಂ.ಎಸ್. ಕಾಳೆ ಅವರು ಗದಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯಿಂದ ನೀಡಲಾಗುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸದ್ಯ ಬಟ್ಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಕಾಳೆ ಅವರು ಮಕ್ಕಳಿಗೆ ಕ್ರೀಡೆಯ ಮಹತ್ವದ ಕುರಿತು ನಿರಂತರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ತಮ್ಮ ಸೇವಾವಧಿಯಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳನ್ನು ಸಿದ್ಧಪಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ತಾಲೂಕು, ಜಿಲ್ಲಾ ಹಾಗೂ ವಲಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ನಿರ್ಣಾಯಕರಾಗಿಯೂ ಕಾರ್ಯನಿರ್ವಹಿಸಿರುವುದು ಅವರ ಕ್ರೀಡಾ ಕ್ಷೇತ್ರದ ಸೇವೆಗೆ ಸಾಕ್ಷಿಯಾಗಿದೆ. ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಎಂ.ಎಸ್. ಕಾಳೆ ಅವರು ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ ಬಟ್ಟೂರು ಗ್ರಾಮದ ಎಸ್‌ಡಿಎಂಸಿ ಅಧ್ಯಕ್ಷರು, ಸರ್ವ ಸದಸ್ಯರು, ಗ್ರಾಮಸ್ಥರು ಹಾಗೂ ಶಿಕ್ಷಕ ಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.

