ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚಿನ ದಿನಗಳಲ್ಲಿ ಆಹಾರ ಸಂಸ್ಕರಣೆ ಹಾಗೂ ಕಲಬೆರಕೆಯಿಂದ ಆಹಾರ ಪದಾರ್ಥಗಳು ವಿಷಕಾರಿಯಾಗುತ್ತಿರುವ ಆತಂಕಕಾರಿ ಬೆಳವಣಿಗೆ ಕಂಡುಬರುತ್ತಿದೆ. ಯುವಜನರಿಗೆ ಆರೋಗ್ಯಕರ ಆಹಾರದ ಕುರಿತು ಸೂಕ್ತ ಅರಿವು ಇಲ್ಲದಿದ್ದರೆ ದೇಶದ ಭವಿಷ್ಯವೇ ಅಭದ್ರವಾಗುವ ಸಾಧ್ಯತೆಯಿದೆ ಎಂದು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಆಹಾರ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಸಾವಿತ್ರಿ ಬ್ಯಾಡಗಿ ಹೇಳಿದರು.
ನಗರದ ಐ.ಪಿ.ಇ.ಟಿ. ಸಂಸ್ಥೆಯ ಆರ್ಯಭಟ ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಆಹಾರ ಸಂಸ್ಕರಣೆ ಹಾಗೂ ಕಲಬೆರಕೆ’ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಹಿಂದಿನ ತಲೆಮಾರಿನವರು ಸಾಂಪ್ರದಾಯಿಕ ಹಾಗೂ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಆದರೆ ಇಂದು ಜಂಕ್ ಫುಡ್ ಮತ್ತು ಫಾಸ್ಟ್ ಫುಡ್‌ನ ಕ್ಷಣಿಕ ರುಚಿ ಹಾಗೂ ಆಕರ್ಷಣೆಗೆ ಮರುಳಾಗಿ ಯುವಜನರು ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಭವಿಷ್ಯದ ಬಗ್ಗೆ ಎಷ್ಟೇ ಕನಸುಗಳನ್ನು ಕಟ್ಟಿಕೊಂಡರೂ ಅವುಗಳನ್ನು ಸಾಕಾರಗೊಳಿಸಲು ಆರೋಗ್ಯಕರ ದೇಹ ಅಗತ್ಯ. ರುಚಿಗೆ ದಾಸರಾಗದೆ ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು ಎಂದು ಡಾ. ಸಾವಿತ್ರಿ ಬ್ಯಾಡಗಿ ಕಿವಿಮಾತು ಹೇಳಿದರು.
ನವಧಾನ್ಯಗಳು, ತರಕಾರಿಗಳು ಹಾಗೂ ಹಣ್ಣುಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಪಾಶ್ಚಾತ್ಯ ಆಹಾರ ಪದ್ಧತಿಯನ್ನು ಅಂಧಾನುಕರಣ ಮಾಡುವ ಬದಲು ಪ್ರೋಟೀನ್, ಕಬ್ಬಿಣಾಂಶ ಹಾಗೂ ವಿಟಮಿನ್‌ಯುಕ್ತ ಸಮತೋಲಿತ ಆಹಾರ ಸೇವಿಸಬೇಕು ಎಂದರು. ಯಾವುದೇ ಆಹಾರ ಪದಾರ್ಥ ಖರೀದಿಸುವ ಮುನ್ನ ಅದರಲ್ಲಿರುವ ಪದಾರ್ಥಗಳು ಹಾಗೂ ಪೋಷಕಾಂಶಗಳ ವಿವರವನ್ನು ಪರಿಶೀಲಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಐ.ಪಿ.ಇ.ಟಿ. ಸಂಸ್ಥೆಯ ಅಧ್ಯಕ್ಷ ಶರಣ್ ರಡ್ಡೇರ ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಸಲಹೆ ನೀಡಿದರು. ಜೀವಶಾಸ್ತ್ರ ಉಪನ್ಯಾಸಕಿ ಮಿಸ್ಬಾ ಶಿರಹಟ್ಟಿ ಆಹಾರ ಸಂಸ್ಕರಣೆ ಕುರಿತು ವಿಶೇಷ ಸ್ಲೈಡ್ ಶೋ ಏರ್ಪಡಿಸಿದ್ದು, ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರು ವಿವರಣಾತ್ಮಕ ಪ್ರದರ್ಶನಗಳನ್ನು ನೀಡಿದರು.
ಕನ್ನಡ ಉಪನ್ಯಾಸಕ ಚಿದಾನಂದಪ್ಪ ಕೊಪ್ಪಳ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಚಾರ್ಯ ಸಂಗಮೇಶ ಸಿ.ಕೆ., ಉಪಪ್ರಾಚಾರ್ಯ ಪ್ರಶಾಂತಕುಮಾರ ದೊಡ್ಡಮನಿ ಸೇರಿದಂತೆ ಉಪನ್ಯಾಸಕರು ಉಪಸ್ಥಿತರಿದ್ದರು.



