ಬೆಂಗಳೂರು: ರಾಜ್ಯದ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಾಯಿತ ಉದ್ದಿಮೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಋತುಚಕ್ರ ರಜೆ ನೀಡುವ ಸಂಬಂಧ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ಹೈಕೋರ್ಟ್‌ಗೆ ತಿಳಿಸಿದೆ.
ಈ ಸಂಬಂಧ ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್, ಬೆಂಗಳೂರು ಹೋಟೆಲ್‌ಗಳ ಸಂಘ, ಅವಿರತ ಡಿಫೆನ್ಸ್ ಸಿಸ್ಟಮ್ಸ್, ಬೆಂಗಳೂರು ಎಂಪ್ಲಾಯರ್ಸ್ ಅಸೋಸಿಯೇಷನ್ ಸೇರಿದಂತೆ ಹಲವು ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಸರ್ಕಾರ ಈ ಮಾಹಿತಿ ನೀಡಿದೆ. ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಅರ್ಜಿಗಳ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಋತುಚಕ್ರ ರಜೆ ಕುರಿತು ಪ್ರಸ್ತುತ ಕಾನೂನಿನಲ್ಲಿ ಸ್ಪಷ್ಟ ನಿಬಂಧನೆಗಳು ಇಲ್ಲದ ಕಾರಣ ಕಾನೂನು ಶೂನ್ಯತೆ ಇದೆ ಎಂದು ತಿಳಿಸಿದರು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಸೂಕ್ತ ಕಾನೂನು ತರಲು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ವಿಚಾರಣೆಯನ್ನು ಮುಂದೂಡಲು ಮನವಿ ಮಾಡಿದರು.
ಅದನ್ನು ಆಲಿಸಿದ ನ್ಯಾಯಪೀಠ, ಅಡ್ವೊಕೇಟ್ ಜನರಲ್ ನೀಡಿದ ಮಾಹಿತಿಯ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಮೌಖಿಕವಾಗಿ ತಿಳಿಸಿತು. ಜೊತೆಗೆ ಸರ್ಕಾರ ಇಂತಹ ಕಾನೂನು ತರಲು ಚಿಂತಿಸುತ್ತಿದೆ ಎಂಬ ಅಂಶವನ್ನು ಆದೇಶದಲ್ಲಿ ದಾಖಲಿಸಬೇಕೇ ಎಂದು ಪ್ರಶ್ನಿಸಿತು. ಇದಕ್ಕೆ ಸರ್ಕಾರದ ಪರ ವಕೀಲರು ಸಮ್ಮತಿ ಸೂಚಿಸಿದರು.
ನಂತರ ನ್ಯಾಯಪೀಠ, ಮಹಿಳೆಯರ ಋತುಚಕ್ರ ರಜೆಯನ್ನು ನಿಯಂತ್ರಿಸುವ ಕಾನೂನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿರುವುದಾಗಿ ಆದೇಶದಲ್ಲಿ ದಾಖಲಿಸಿಕೊಂಡಿತು. ಬೇಸಿಗೆ ರಜೆಗೆ ಮುನ್ನದ ಕೊನೆಯ ದಿನವಾಗಿರುವುದರಿಂದ ಹಾಗೂ ಸರ್ಕಾರ ಕಾನೂನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿರುವುದರಿಂದ ಪ್ರಕರಣದ ಮುಂದಿನ ವಿಚಾರಣೆಯನ್ನು ಬೇಸಿಗೆ ರಜೆ ಬಳಿಕಕ್ಕೆ ಮುಂದೂಡಿತು.
ಇದೇ ವೇಳೆ, ಮಧ್ಯಂತರದಲ್ಲಿ ಯಾವುದೇ ಹೊಸ ಬೆಳವಣಿಗೆಗಳು ಸಂಭವಿಸಿ ಅರ್ಜಿದಾರರು ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವೆಂದು ಭಾವಿಸಿದರೆ, ರಜಾ ಕಾಲದ ಪೀಠವನ್ನು ಸಂಪರ್ಕಿಸಲು ಅವಕಾಶವಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.



