ಬೆಂಗಳೂರು: ಗ್ಯಾಸ್ ಬೆಲೆ ಏರಿಕೆ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ಮುಗಿಯುವುದನ್ನು ಕಾಯುತ್ತಿದ್ದ ಬಿಜೆಪಿಗರು, ತಕ್ಷಣವೇ ಗ್ಯಾಸ್ ಬೆಲೆ ಹೆಚ್ಚಳ ಮಾಡಿದ್ದಾರೆ ಎಂದು ಆರೋಪಿಸಿದರು. ಸಾಮಾನ್ಯ ಜನರು ಹಾಗೂ ಕಾರ್ಮಿಕರ ಸಂಕಷ್ಟದ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ ಎಂದು ಟೀಕಿಸಿದರು.
“ಗ್ಯಾಸ್ ಬೆಲೆ ಏರಿಸಿ ಇದೀಗ ‘ಸೌದೆ ಭಾಗ್ಯ’ ಕೊಡುತ್ತಿದ್ದಾರೆ. ಜನರ ಬದುಕು ಹೇಗೆ ಸಾಗಬೇಕು ಎಂಬುದನ್ನು ಕೇಂದ್ರ ಸರ್ಕಾರ ಯೋಚಿಸಬೇಕು,” ಎಂದು ಕಿಡಿಕಾರಿದರು. ಈ ವಿಚಾರದಲ್ಲಿ ಮಾಧ್ಯಮಗಳೂ ಧ್ವನಿ ಎತ್ತಬೇಕು ಎಂದು ಅವರು ಮನವಿ ಮಾಡಿದರು.
ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಕೂಡ ಪ್ರಶ್ನಿಸಿದ ಡಿಕೆ ಶಿವಕುಮಾರ್, ಅಕ್ಕಪಕ್ಕದ ರಾಷ್ಟ್ರಗಳೊಂದಿಗೆ ಸಂಬಂಧ ಸರಿಯಾಗಿಲ್ಲ ಎಂದು ಹೇಳಿದರು. ಬಡವರಿಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಸುಮಾರು ಒಂದೂವರೆ ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
“ಸಾವಿರ ರೂಪಾಯಿ ಹೆಚ್ಚಾದರೆ ಸಾಮಾನ್ಯ ಜನರು ಹೇಗೆ ಬದುಕಬೇಕು ಎಂಬುದನ್ನು ಮನಗಂಡು ನಾವು ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ. ಜನರಿಗೆ ನೆರವಾಗುವ ಹೋರಾಟವನ್ನು ಮುಂದುವರಿಸುತ್ತೇವೆ,” ಎಂದರು.
ಇದೇ ವೇಳೆ ಬಿಜೆಪಿ ನಾಯಕರಾದ ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಅವರು, “ಅವರು ಕೇವಲ ಟೀಕೆ ಮಾಡುವುದಕ್ಕಷ್ಟೇ ಸೀಮಿತ. ಜನರ ಸಮಸ್ಯೆಗಳ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮಾತನಾಡುತ್ತಿದ್ದರು,” ಎಂದು ವಾಗ್ದಾಳಿ ನಡೆಸಿದರು.



