ಗದಗ: ಮಗನು ತಂದೆಯ ಅಸ್ತಿತ್ವದ ಮುಂದುವರಿಕೆಯ ವಾರಸುದಾರನಾಗಿದ್ದನ್ನು ಮಕ್ಕಳು ಮರೆಯಬಾರದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು. “ಮಗ ತಂದೆಯ ಪ್ರತಿರೂಪ” ಎಂಬುದು ಕೇವಲ ದೈಹಿಕ ಹೋಲಿಕೆಯಲ್ಲ, ಅದು ಆಳವಾದ ಭಾವನಾತ್ಮಕ ಮತ್ತು ಅನುವಂಶೀಯ ಬಂಧನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಐತಿಹಾಸಿಕ ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿದ್ದು ಪಾಟೀಲರು ತಮ್ಮ ತಂದೆಯ ಹೆಸರಲ್ಲಿ ನಿರ್ಮಿಸಿದ ದಿ. ಅಜ್ಜಣ್ಣ ಕೆ. ಪಾಟೀಲ ಶಾಂತಿವನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ದಿ. ಅಜ್ಜಣ್ಣ ಪಾಟೀಲ ಹಾಗೂ ರೇಣುಕಾ ಅಜ್ಜಣ್ಣ ಪಾಟೀಲರ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿದರು.
ತಂದೆಯಂತೆ ಸಿದ್ದು ಪಾಟೀಲರು ನಡೆ-ನುಡಿಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕೌಟುಂಬಿಕ, ಶೈಕ್ಷಣಿಕ ಹಾಗೂ ವ್ಯವಹಾರಿಕ ಚಿಂತನೆಗಳನ್ನು ಅಳವಡಿಸಿಕೊಂಡಿರುವುದು ಹೆಮ್ಮೆಗೇ ಕಾರಣವಾಗಿದೆ ಎಂದು ಅವರು ಹೇಳಿದರು.
ತಂದೆಯ ಗುಣಲಕ್ಷಣಗಳು ಮತ್ತು ಸ್ವಭಾವಗಳು ಮಗನಿಗೆ ಅನುವಂಶೀಯವಾಗಿ ವರ್ಗಾವಣೆಯಾಗುತ್ತವೆ ಎಂಬುದನ್ನು ಸಿದ್ದು ಪಾಟೀಲರ ವ್ಯಕ್ತಿತ್ವ ಸ್ಪಷ್ಟಪಡಿಸುತ್ತದೆ. ತಂದೆಯ ಹೆಸರಲ್ಲಿ ಶಾಂತಿವನ ನಿರ್ಮಿಸಿ, ಅದರೊಳಗೆ ತಂದೆ-ತಾಯಿಯ ಗದ್ದುಗೆ ನಿರ್ಮಿಸುವ ಮೂಲಕ ಪೂರ್ವಜರ ಅಸ್ತಿತ್ವವನ್ನು ಉಳಿಸಿ ಬೆಳೆಸುತ್ತಿರುವುದು ಕುಟುಂಬದ ಆದರ್ಶತೆಯ ಸಂಕೇತವಾಗಿದೆ ಎಂದು ಸಚಿವರು ಹೇಳಿದರು.
ಸುಮಾರು 6 ಎಕರೆ ಪಿತ್ರಾರ್ಜಿತ ಆಸ್ತಿಯನ್ನು ಹಾಳು ಮಾಡದೆ ಶಾಂತಿವನವಾಗಿ ರೂಪಿಸಿರುವ ಸಿದ್ದು ಪಾಟೀಲರು, 3 ಬೋರ್‌ವೆಲ್‌ಗಳನ್ನು ತೆಗೆದು, ತೋಟದ ಬಾವಿಯ ನೀರನ್ನು ಬಳಸಿಕೊಂಡು ಅಡಿಕೆ, ಪಪ್ಪಾಯ, ಬಾಳೆ, ಗಂಧ, ನೆರಳೆ, ದ್ರಾಕ್ಷಿ, ಮಹಾಗಣಿ, ಆಬಾಲಿ, ಮಲ್ಲಿಗೆ ಮತ್ತು ಸೇವಂತಿಗೆ ಹೂವಿನ ಬೆಳೆಗಳನ್ನು ಬೆಳೆಸುತ್ತಿದ್ದಾರೆ. ಇದರಿಂದ ಅವರು ತಂದೆಯಂತೆ ಅನುಕರಣೀಯ ಕೃಷಿಕರಾಗಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ತಂದೆಯು ಕುಟುಂಬದ ಹೊಣೆಗಾರಿಕೆ ಮತ್ತು ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುತ್ತಾನೆ. ಅದೇ ಹಾದಿಯಲ್ಲಿ ಮಗ ಸಾಗುತ್ತಾನೆ ಎಂಬುದಕ್ಕೆ ಸಿದ್ದು ಪಾಟೀಲರು ಉತ್ತಮ ಉದಾಹರಣೆ ಎಂದು ಹೇಳಿದರು.
ತಂದೆ-ಮಗನ ನಡುವಿನ ಪ್ರೀತಿ ಮತ್ತು ಗೌರವವು ಅಪರೂಪದ, ಹೃದಯಸ್ಪರ್ಶಿ ಬಾಂಧವ್ಯವಾಗಿದ್ದು, ಅದನ್ನು ಅರಿತುಕೊಂಡರೆ ಕುಟುಂಬದ ನೆಲೆಗಟ್ಟು ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜನಪ್ರಿಯ ಮಾಜಿ ಶಾಸಕ ಡಿ.ಆರ್. ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಕಾಂಗ್ರೆಸ್ ನಾಯಕ ದಶರಥ ಗಾಣಿಗೇರ ಹಾಗೂ ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

