ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ನಡೆದ 151 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವಘಡವೊಂದು ಸಂಭವಿಸಿದೆ.
ಕಾರ್ಯಕ್ರಮದ ವೇದಿಕೆ ಮೇಲಿಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೆರಳಿದ ಬೆನ್ನಲ್ಲೇ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ.
ಅದೇ ವೇಳೆ ಸಚಿವ ಈಶ್ವರ ಖಂಡ್ರೆ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಸಿಬ್ಬಂದಿ ತಕ್ಷಣವೇ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಹೊಗೆ ಹೆಚ್ಚಾದ ಹಿನ್ನೆಲೆ ಸ್ಥಳೀಯರು ಗಾಬರಿಗೊಂಡರು.
ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿ ಫೈರ್ ಉಪಕರಣಗಳ ಸಹಾಯದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸಮಾರಂಭದಲ್ಲಿ ಭಾಗವಹಿಸಿದ್ದವರು ಹಾಗೂ ಅಧಿಕಾರಿಗಳು ತಕ್ಷಣದ ಕ್ರಮದಿಂದ ದೊಡ್ಡ ದುರಂತ ತಪ್ಪಿದ ಹಿನ್ನೆಲೆಯಲ್ಲಿ ನೆಮ್ಮದಿ ವ್ಯಕ್ತಪಡಿಸಿದ್ದಾರೆ.

