ಕೋಲಾರ: ಜಿಲ್ಲೆಯ ಹೊರವಲಯದಲ್ಲಿರುವ ಪ್ರಸಿದ್ಧ ಅಂತರಗಂಗೆ ಪ್ರದೇಶದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಈ ಅವಘಡದಿಂದ ಅಪಾರ ಪ್ರಮಾಣದ ಕಾಡು ಸಂಪತ್ತು ನಾಶವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರತಿದಿನ ಸಾವಿರಾರು ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶದಲ್ಲಿ, ಜನರು ನಡೆದುಕೊಂಡು ಹೋಗುವ ದಾರಿಯ ಮಧ್ಯೆ ಬೆಟ್ಟದ ಕೆಲವು ಭಾಗಗಳಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವುದು ತಿಳಿದುಬಂದಿದೆ. ಪರಿಣಾಮವಾಗಿ ದೊಡ್ಡ ಪ್ರಮಾಣದ ಕಾಡು ಬೆಂಕಿಗಾಹುತಿಯಾಗಿದ್ದು, ಅಲ್ಲಿದ್ದ ಸಣ್ಣಪುಟ್ಟ ಪ್ರಾಣಿ–ಪಕ್ಷಿಗಳೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು.
ಅಂತರಗಂಗೆ ಬೆಟ್ಟ ಪ್ರದೇಶದಲ್ಲಿ ವಾಸಿಸುವ ಪ್ರಾಣಿ ಸಂಕುಲಕ್ಕೆ ಈ ಘಟನೆ ಭಾರೀ ಆತಂಕ ಉಂಟುಮಾಡಿದ್ದು, ಪದೇಪದೇ ಇಂತಹ ಘಟನೆಗಳು ನಡೆಯುತ್ತಿರುವುದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಕಿಡಿಗೇಡಿಗಳ ಇಂತಹ ಕೃತ್ಯಗಳಿಂದ ಅಪಾರ ಕಾಡು ಸಂಪತ್ತು ನಾಶವಾಗುತ್ತಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.



