ಚಿಕ್ಕಬಳ್ಳಾಪುರ: ಹಣ್ಣು ಹಾಗೂ ತರಕಾರಿ ಬೆಳೆಗೆ ಪ್ರಸಿದ್ಧಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಬಾರಿ ದ್ರಾಕ್ಷಿ ಬೆಳೆ ರೈತರಿಗೆ ಸಂತಸ ತಂದಿದೆ.
ಜಿಲ್ಲೆಯಾದ್ಯಂತ ಸುಮಾರು 5,000 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ದ್ರಾಕ್ಷಿ ಬೆಳೆಯಲಾಗಿದ್ದು, ‘ದಿಲ್ ಖುಷ್’ ತಳಿಗೆ ವಿಶೇಷ ಬೇಡಿಕೆ ವ್ಯಕ್ತವಾಗಿದೆ. ತೀವ್ರ ಬಿಸಿಲಿನ ನಡುವೆಯೂ ಈ ತಳಿಯ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಆಕರ್ಷಣೆ ಕಂಡುಬಂದಿದೆ. ಇದರ ಪರಿಣಾಮವಾಗಿ ರೈತರಿಗೆ ಉತ್ತಮ ಬೆಲೆ ದೊರೆಯುತ್ತಿದ್ದು, ವ್ಯಾಪಾರಿಗಳು ನೇರವಾಗಿ ತೋಟಗಳಿಗೆ ಭೇಟಿ ನೀಡಿ ಪ್ರತಿ ಕಿಲೋಗ್ರಾಂ ದ್ರಾಕ್ಷಿಗೆ 50 ರೂಪಾಯಿ ನೀಡಿ ಖರೀದಿ ಮಾಡುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ದ್ರಾಕ್ಷಿಯ ಇಳುವರಿ ಕಡಿಮೆಯಾಗಿರುವ ಹಿನ್ನೆಲೆ, ಅಲ್ಲಿನ ವ್ಯಾಪಾರಿಗಳು ಇದೀಗ ಚಿಕ್ಕಬಳ್ಳಾಪುರದ ರೈತರತ್ತ ಮುಖ ಮಾಡಿದ್ದಾರೆ. ಇದು ಸ್ಥಳೀಯ ರೈತರಿಗೆ ವರದಾನವಾಗಿ ಪರಿಣಮಿಸಿದೆ.
ಇನ್ನೂ ಈ ದ್ರಾಕ್ಷಿಗೆ ಬಾಂಗ್ಲಾದೇಶ ಸೇರಿದಂತೆ ನೆರೆಯ ದೇಶಗಳಲ್ಲಿ ಭಾರೀ ಬೇಡಿಕೆ ಇದೆ. ವ್ಯಾಪಾರಿಗಳು ಮುಂಗಡ ಹಣ ನೀಡಿ ತೋಟದಲ್ಲೇ ದ್ರಾಕ್ಷಿಯನ್ನು ಖರೀದಿಸುತ್ತಿರುವುದು ರೈತರ ಆದಾಯವನ್ನು ಹೆಚ್ಚಿಸಿದೆ.
ದ್ರಾಕ್ಷಿ ಬೆಳೆಗಾರರಾದ ವೆಂಕಟರೆಡ್ಡಿ ಹಾಗೂ ಚಿಕ್ಕನಾಗವಳ್ಳಿ ಗ್ರಾಮದ ಕೊಂಡಪ್ಪನವರಂತಹ ಅನೇಕ ರೈತರು ಈ ಬಾರಿ ಉತ್ತಮ ಬೆಲೆ ಮತ್ತು ಬೇಡಿಕೆಯಿಂದ ಸಂತಸ ವ್ಯಕ್ತಪಡಿಸಿದ್ದಾರೆ.



