ಇಂಡಿಯನ್ ಪ್ರೀಮಿಯರ್ ಲೀಗ್ 2026ರ 47ನೇ ಪಂದ್ಯ ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಲಿದೆ.
ಪ್ಲೇಆಫ್ ಆಸೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎರಡೂ ತಂಡಗಳಿಗೆ ಈ ಪಂದ್ಯ ಅತ್ಯಂತ ನಿರ್ಣಾಯಕವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ 8 ಪಂದ್ಯಗಳಲ್ಲಿ 6 ಸೋಲು ಕಂಡು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದು, ಸತತ ಐದು ಸೋಲುಗಳಿಂದ ಸಂಕಷ್ಟದಲ್ಲಿದೆ. ರಿಷಭ್ ಪಂತ್ ನೇತೃತ್ವದ ತಂಡ ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿದ್ದು, ಬೌಲಿಂಗ್ ವಿಭಾಗದಲ್ಲಿ ಮಾತ್ರ ಸ್ವಲ್ಪ ಸ್ಥಿರತೆ ಕಾಣುತ್ತಿದೆ.
ಮುಂಬೈ ಇಂಡಿಯನ್ಸ್ ಕೂಡ 9 ಪಂದ್ಯಗಳಲ್ಲಿ 7 ಸೋಲು ಕಂಡು ಒತ್ತಡದಲ್ಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ಇತ್ತೀಚಿನ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದು, ಇಂದಿನ ಪಂದ್ಯದಲ್ಲಿ ಸೋಲಾದರೆ ಪ್ಲೇಆಫ್ ರೇಸ್‌ನಿಂದ ಹೊರಬೀಳುವ ಭೀತಿ ಎದುರಾಗಲಿದೆ.
ಮುಂಬೈ ತಂಡದಲ್ಲಿ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ರೋಹಿತ್ ಶರ್ಮಾ ಗಾಯದ ಕಾರಣದಿಂದ ಅನುಪಸ್ಥಿತಿಯಾಗಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ.
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಇದುವರೆಗೆ 8 ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಲಕ್ನೋ 6 ಪಂದ್ಯಗಳನ್ನು ಗೆದ್ದಿರುವುದು ಗಮನಾರ್ಹವಾಗಿದೆ.
ಇಂದಿನ ಪಂದ್ಯವನ್ನು ಗೆಲ್ಲುವ ತಂಡಕ್ಕೆ ಪ್ಲೇಆಫ್ ಆಸೆಗೆ ಜೀವಂತಿಕೆ ಸಿಗಲಿದ್ದು, ಸೋಲುವ ತಂಡಕ್ಕೆ ಟೂರ್ನಿಯಿಂದ ಹೊರಬೀಳುವ ಭೀತಿ ಹೆಚ್ಚಲಿದೆ ಎಂದು ಕ್ರಿಕೆಟ್ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.



