ಬೆಳಗಾವಿ: ಹಣವನ್ನು ದ್ವಿಗುಣಗೊಳಿಸಿಕೊಡುವುದಾಗಿ ನಂಬಿಸಿ ಬರೋಬ್ಬರಿ ₹2.68 ಕೋಟಿ ದರೋಡೆಗೆ ಯತ್ನಿಸಿದ ಆರೋಪ ಬೆಳಗಾವಿ ಜಿಲ್ಲೆಯಲ್ಲಿ ಕೇಳಿಬಂದಿದೆ.

ಶಾಸಕ ರಮೇಶ್ ಜಾರಕಿಹೊಳಿ ಅವರ ಗನ್ಮ್ಯಾನ್ ಚಿದಾನಂದ ಕುರಬೆಟ್ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಅಕ್ಟೋಬರ್ 30ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಂಧಿತರನ್ನು ಚಿದಾನಂದ ಕುರಬೆಟ್, ಸಂಜೀವ್ ಅರಭಾವಿ, ರಾಜಾರಾಮ್, ರಮೇಶ್ ಮಾಳ್ಯಾಗೋಳ, ಪ್ರಕಾಶ್, ರಾಘವೇಂದ್ರ ಕೊಪ್ಪದ್ ಹಾಗೂ ರಾಮಪ್ಪ ತಳವಾರ ಎಂದು ಗುರುತಿಸಲಾಗಿದೆ. ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ಹಣದ ಆಮಿಷವೊಡ್ಡಿ ನಂಬಿಸಿದ ಗನ್ಮ್ಯಾನ್:
ಕಲ್ಮೇಶ್ ಎಂಬ ವ್ಯಕ್ತಿ ಈ ಹಿಂದೆ ಶಿವಂ ಅಸೋಸಿಯೇಟ್ಸ್ನಲ್ಲಿ ಹಣ ಕಳೆದುಕೊಂಡಿದ್ದರು ಎನ್ನಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಚಿದಾನಂದ ಕುರಬೆಟ್, ಹಣ ನೀಡಿದರೆ ಹೆಚ್ಚಿನ ಮೊತ್ತವನ್ನು ಮರಳಿಸುವುದಾಗಿ ನಂಬಿಸಿದ್ದಾನೆ. ಒಂದು ಲಕ್ಷ ರೂಪಾಯಿಗೆ 30 ಸಾವಿರ ರೂಪಾಯಿ ಹೆಚ್ಚುವರಿ ಹಣ ನೀಡುವುದಾಗಿ ಆಮಿಷವೊಡ್ಡಿದ್ದಾನೆ. ಹಣ ನೀಡಿದರೆ ಖಾತೆಗೆ ಜಮೆ ಮಾಡುವುದಾಗಿಯೂ ಭರವಸೆ ನೀಡಿದ್ದಾನೆ.
ಇದನ್ನು ನಂಬಿದ ಕಲ್ಮೇಶ್ ಬ್ಯಾಂಕ್, ಸೊಸೈಟಿ ಹಾಗೂ ಸ್ನೇಹಿತರಿಂದ ಒಟ್ಟು ₹2.68 ಕೋಟಿ ಸಂಗ್ರಹಿಸಿದ್ದಾರೆ. ಬಳಿಕ ಈ ವಿಚಾರವನ್ನು ಚಿದಾನಂದನಿಗೆ ತಿಳಿಸಿದ್ದಾರೆ.
ಶೆಡ್ಗೆ ಕರೆಸಿ ಖಾರದ ಪುಡಿ ಎರಚಿ ಹಲ್ಲೆ:
ಹಣದ ವಿಚಾರವಾಗಿ ಮಾತನಾಡಲು ಚಿದಾನಂದ ಹಾಗೂ ಆತನ ತಂಡ ಕಲ್ಮೇಶ್ ಅವರನ್ನು ಶೆಡ್ಗೆ ಕರೆದಿದ್ದಾರೆ. ಹಣ ಎಣಿಕೆ ಮಾಡುವ ನೆಪದಲ್ಲಿ ಅಲ್ಲಿಗೆ ಬಂದಾಗ ತಂಡ ದಾಳಿ ನಡೆಸಿ, ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿ ಹಣ ದೋಚಲು ಯತ್ನಿಸಿದೆ ಎನ್ನಲಾಗಿದೆ.
ಆದರೆ ಮುನ್ನೆಚ್ಚರಿಕೆ ವಹಿಸಿದ್ದ ಕಲ್ಮೇಶ್, ಶೆಡ್ ಸುತ್ತಲೂ ತನ್ನ ಪರಿಚಯದ ಯುವಕರನ್ನು ಕಾವಲಿಗೆ ನಿಯೋಜಿಸಿದ್ದರು. ದಾಳಿ ನಡೆದ ಕೂಡಲೇ ಶೆಡ್ ಹೊರಗಿದ್ದ ಯುವಕರು ಆರೋಪಿಗಳನ್ನು ಹಿಡಿದಿದ್ದಾರೆ. ಬಳಿಕ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಪೊಲೀಸರು ಆರೋಪಿಗಳಿಂದ ₹2.39 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಉಳಿದ ಹಣದ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಗನ್ಮ್ಯಾನ್ ಚಿದಾನಂದ ಅಮಾನತು:
ಶಾಸಕ ರಮೇಶ್ ಜಾರಕಿಹೊಳಿ ಅವರ ಗನ್ಮ್ಯಾನ್ ಚಿದಾನಂದ ಕುರಬೆಟ್ ಬಂಧನವಾಗುತ್ತಿದ್ದಂತೆ ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದಲ್ಲಿ ಶಾಸಕರ ಪಾತ್ರವಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದು, ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹೆಚ್ಚಿನ ಹಣದ ಆಮಿಷಕ್ಕೆ ಒಳಗಾಗಿ ಇಂತಹ ವಂಚನೆಗಳಿಗೆ ಬಲಿಯಾಗದಂತೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.









