ದಾವಣಗೆರೆ: ಕಿರಾಣಿ ಅಂಗಡಿಯಲ್ಲಿ ಪೂಜೆ ಸಲ್ಲಿಸಲು ದೀಪ ಹಚ್ಚುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಅಂಗಡಿ ಮಾಲೀಕ ಸಜೀವ ದಹನಗೊಂಡಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ನಡೆದಿದೆ. ಅಂಗಡಿಯಲ್ಲಿ ಸಂಗ್ರಹಿಸಿಟ್ಟಿದ್ದ ಪೆಟ್ರೋಲ್ಗೆ ಬೆಂಕಿಯ ಕಿಡಿ ತಗುಲಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

ಕ್ಯಾಸಿನಕೆರೆ ಗ್ರಾಮದ ಶಂಕ್ರಯ್ಯ (55) ಮೃತಪಟ್ಟ ವ್ಯಕ್ತಿ. ಗ್ರಾಮದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಅವರು, ದಿನಸಿ ಸಾಮಗ್ರಿಗಳ ಮಾರಾಟದ ಜೊತೆಗೆ ಅಕ್ರಮವಾಗಿ ಪೆಟ್ರೋಲ್ ಕೂಡ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಎಂದಿನಂತೆ ಬೆಳಗ್ಗೆ ಅಂಗಡಿಯ ಬಾಗಿಲು ತೆರೆದ ಶಂಕ್ರಯ್ಯ, ವ್ಯಾಪಾರ ಆರಂಭಿಸುವ ಮೊದಲು ಪೂಜೆ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ದೀಪ ಹಚ್ಚುತ್ತಿದ್ದಂತೆ ಬೆಂಕಿಯ ಕಿಡಿ ಸಮೀಪದಲ್ಲಿಯೇ ಇರಿಸಿದ್ದ ಪೆಟ್ರೋಲ್ಗೆ ತಗುಲಿದೆ ಎನ್ನಲಾಗಿದೆ.
ಅಂಗಡಿಯಲ್ಲಿ ಪೆಟ್ರೋಲ್ ಸಂಗ್ರಹಿಸಿಟ್ಟಿದ್ದರಿಂದ ಬೆಂಕಿ ಕ್ಷಣಾರ್ಧದಲ್ಲಿಯೇ ವ್ಯಾಪಿಸಿದೆ. ನೋಡನೋಡುತ್ತಿದ್ದಂತೆ ಅಂಗಡಿಯಲ್ಲಿ ಬೆಂಕಿಯ ಜ್ವಾಲೆಗಳು ಆವರಿಸಿದ್ದು, ಶಂಕ್ರಯ್ಯ ಅವರಿಗೆ ಹೊರಗೆ ಬರಲು ಸಾಧ್ಯವಾಗಿಲ್ಲ. ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೊನ್ನಾಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.










