ರಾಯಚೂರು: ದೀಪಾವಳಿ ಬಲಿಪಾಡ್ಯಮಿ ಅಂಗವಾಗಿ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಈ ಶುಭ ಸಂದರ್ಭದಲ್ಲಿ ಬ್ರಹ್ಮ ಕರಾರ್ಚಿತ ಶ್ರೀ ಮೂಲ ರಾಮದೇವರು ಸೇರಿದಂತೆ ಮಠದ ಇತರ ಸಂಸ್ಥಾನ ಮೂರ್ತಿಗಳಿಗೆ ಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಮಹಾ ಅಭಿಷೇಕ ನೆರವೇರಿಸಿದರು.
ಮಹಾ ಅಭಿಷೇಕದ ಬಳಿಕ ಮೂಲ ರಾಮದೇವರು, ದಿಗ್ವಿಜಯ ರಾಮದೇವರು ಹಾಗೂ ಜಯರಾಮ ದೇವರುಗಳಿಗೆ ಪವಿತ್ರ ಗಂಧ ಲೇಪನ ಮಾಡಲಾಯಿತು. ನಂತರ ಶ್ರೀಗಳು ವಿಶೇಷ ಸಂಸ್ಥಾನ ಪೂಜೆಯನ್ನು ನೆರವೇರಿಸಿದರು.
ವರ್ಷಕ್ಕೆ ಎರಡು ಬಾರಿ ಮಾತ್ರ ಮಹಾ ಅಭಿಷೇಕ:
ಮಂತ್ರಾಲಯದ ಶ್ರೀಮಠದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಮಹಾ ಅಭಿಷೇಕಕ್ಕೆ ವಿಶೇಷ ಮಹತ್ವವಿದೆ. ಬ್ರಹ್ಮ ಕರಾರ್ಚಿತ ಶ್ರೀ ಮೂಲ ರಾಮದೇವರಿಗೆ ವರ್ಷದಲ್ಲಿ ಕೇವಲ ಎರಡು ಬಾರಿ ಮಾತ್ರ ಮಹಾ ಅಭಿಷೇಕ ನೆರವೇರಿಸಲಾಗುತ್ತದೆ. ಶ್ರೀರಾಮ ನವಮಿ ಹಾಗೂ ಬಲಿಪಾಡ್ಯಮಿಯ ಶುಭ ದಿನದಂದು ಈ ವಿಶೇಷ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸುವುದು ಸಂಪ್ರದಾಯವಾಗಿದೆ.
ಮಹಾ ಅಭಿಷೇಕ ಕಣ್ತುಂಬಿಕೊಂಡ ಭಕ್ತರು:
ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ನಡೆದ ಈ ವಿಶೇಷ ಪೂಜಾ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ರಾಜ್ಯ ಸೇರಿದಂತೆ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯಕ್ಕೆ ಆಗಮಿಸಿದ್ದರು. ಮಹಾ ಅಭಿಷೇಕ ಹಾಗೂ ವಿಶೇಷ ಪೂಜೆಯಲ್ಲಿ ಭಾಗವಹಿಸಿದ ಭಕ್ತರು ಶ್ರೀಗಳ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು.
ಬಲಿಪಾಡ್ಯಮಿಯ ಪವಿತ್ರ ದಿನದಂದು ಮಂತ್ರಾಲಯದ ರಾಯರ ಮಠದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ಭಕ್ತರಲ್ಲಿ ಭಕ್ತಿ ಮತ್ತು ಆಧ್ಯಾತ್ಮಿಕ ಸಂಭ್ರಮವನ್ನು ಮೂಡಿಸಿದವು.










