ನವದೆಹಲಿ: ಅಜ್ಜನ ಆಸ್ತಿ ತಂದೆಗೆ ಹಂಚಿಕೆಯಾದ ಮಾತ್ರಕ್ಕೆ ಮೊಮ್ಮಗನಿಗೆ ಅದರಲ್ಲಿ ಜನ್ಮಸಿದ್ಧ ಹಕ್ಕು ದೊರೆಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರ ಸೆಕ್ಷನ್ 8ರ ಅಡಿಯಲ್ಲಿ ಅಜ್ಜನ ಆಸ್ತಿ ಮೊದಲನೇ ವರ್ಗದ ವಾರಸುದಾರರಿಗೆ ಹಂಚಿಕೆಯಾದ ಬಳಿಕ ತಂದೆಗೆ ಸಿಕ್ಕ ಪಾಲು ಅವರ ವೈಯಕ್ತಿಕ ಆಸ್ತಿಯಾಗುತ್ತದೆ. ಹೀಗಾಗಿ ಆಸ್ತಿಯಲ್ಲಿ ಮಗನಿಗೆ ಜನ್ಮದಿಂದಲೇ ಪಾಲು ಕೇಳುವ ಹಕ್ಕಿಲ್ಲ ಎಂದು ನ್ಯಾಯಮೂರ್ತಿಗಳಾದ ಆಗಸ್ಟೀನ್ ಜಾರ್ಜ್ ಮಸಿಹ್ ಮತ್ತು ಸುನೀತಾ ಅಗರ್ವಾಲ್ ಅವರನ್ನೊಳಗೊಂಡ ಪೀಠ ಸ್ಪಷ್ಟಪಡಿಸಿದೆ.
ತಂದೆಗೆ ಅಜ್ಜನಿಂದ ಬಂದ ಜಮೀನಿನಲ್ಲಿ ಅರ್ಧ ಪಾಲು ಕೇಳಿ ಮಗ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ ಏನು?
ತಮಿಳುನಾಡಿನಲ್ಲಿ ಅಜ್ಜನಿಗೆ ಸೇರಿದ ಸುಮಾರು 1,811 ಚದರ ಅಡಿ ಜಮೀನಿನ ಹಂಚಿಕೆ ವಿಚಾರವಾಗಿ ವಿವಾದ ಉಂಟಾಗಿತ್ತು. ಅಜ್ಜನ ಆಸ್ತಿಯಲ್ಲಿ ಪಾಲು ಕೇಳಿ ಅವರ ಮಗಳು, ಅಂದರೆ ಅರ್ಜಿದಾರನ ಚಿಕ್ಕಮ್ಮ, ನ್ಯಾಯಾಲಯದ ಮೊರೆ ಹೋಗಿದ್ದರು.
1994ರಲ್ಲಿ ನಡೆದ ರಾಜಿ ಒಪ್ಪಂದದ ಪ್ರಕಾರ ಜಮೀನಿನ ಒಂದು ಭಾಗ ಅರ್ಜಿದಾರನ ತಂದೆಗೆ ಹಂಚಿಕೆಯಾಗಿತ್ತು. ಇದೇ ವರ್ಷ ಅರ್ಜಿದಾರ ಜನಿಸಿದ್ದ. ಬಳಿಕ 1997ರಲ್ಲಿ ತಂದೆ ಆ ಜಮೀನನ್ನು ಇಬ್ಬರು ಖರೀದಿದಾರರಿಗೆ ಮಾರಾಟ ಮಾಡಿದ್ದರು.
ಇದನ್ನು ಪ್ರಶ್ನಿಸಿ ಮಗನ ಪರವಾಗಿ ತಾಯಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಅಜ್ಜನ ಆಸ್ತಿ ಜಂಟಿ ಕುಟುಂಬದ ಆಸ್ತಿಯಾಗಿದ್ದು, ತಂದೆಗೆ ಬಂದ ಪಾಲಿನಲ್ಲಿ ಮಗನಿಗೂ ಅರ್ಧ ಹಕ್ಕು ಇದೆ ಎಂಬುದು ಅವರ ವಾದವಾಗಿತ್ತು.
ಕೆಳಹಂತದ ನ್ಯಾಯಾಲಯಗಳಿಂದ ಸುಪ್ರೀಂ ಕೋರ್ಟ್ವರೆಗೆ:
ಮೊದಲಿಗೆ ಚೆನ್ನೈನ ನಗರ ಸಿವಿಲ್ ನ್ಯಾಯಾಲಯ ಮಗನ ಪರವಾಗಿ ವಿಭಜನೆಯ ಪ್ರಾಥಮಿಕ ಆದೇಶ ನೀಡಿತ್ತು. ಆದರೆ ಮೇಲ್ಮನವಿ ನ್ಯಾಯಾಲಯ ಈ ಆದೇಶವನ್ನು ರದ್ದುಗೊಳಿಸಿತ್ತು. ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ತಂದೆಗೆ ಬಂದ ಆಸ್ತಿ ಅವರ ವೈಯಕ್ತಿಕ ಆಸ್ತಿಯಾಗಿದ್ದು, ಮಗನಿಗೆ ಅದರಲ್ಲಿ ಜನ್ಮಸಿದ್ಧ ಹಕ್ಕಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ಮದ್ರಾಸ್ ಹೈಕೋರ್ಟ್ ಕೂಡ ಇದೇ ತೀರ್ಪನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಮಗ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 8ರ ಪ್ರಕಾರ, ಹಿಂದೂ ಪುರುಷನೊಬ್ಬ ವಿಲ್ ಬರೆಯದೆ ಮೃತಪಟ್ಟರೆ, ಆತನ ಆಸ್ತಿ ಮೊದಲನೇ ವರ್ಗದ ವಾರಸುದಾರರಿಗೆ ಹಂಚಿಕೆಯಾಗುತ್ತದೆ. ಈ ಪಟ್ಟಿಯಲ್ಲಿ ಮಗ, ಮಗಳು, ಪತ್ನಿ ಮತ್ತು ತಾಯಿ ಸೇರಿದಂತೆ ಕಾನೂನಿನಲ್ಲಿ ಗುರುತಿಸಿರುವ ವಾರಸುದಾರರು ಸೇರಿರುತ್ತಾರೆ.
ಈ ರೀತಿ ಅಜ್ಜನ ಆಸ್ತಿ ಹಂಚಿಕೆಯಾದಾಗ ತಂದೆಗೆ ಸಿಕ್ಕ ಪಾಲು ಅವರ ವೈಯಕ್ತಿಕ ಆಸ್ತಿಯಾಗುತ್ತದೆ. ಅದು ಸ್ವಯಂಚಾಲಿತವಾಗಿ ತಂದೆ ಮತ್ತು ಮಕ್ಕಳ ಜಂಟಿ ಕುಟುಂಬದ ಆಸ್ತಿಯಾಗುವುದಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.
ಅಲ್ಲದೆ, ಅಜ್ಜನ ಆಸ್ತಿ ಸೆಕ್ಷನ್ 8ರ ಅಡಿಯಲ್ಲಿ ಹಂಚಿಕೆಯಾದ ಬಳಿಕ ಮೊಮ್ಮಗನಿಗೆ ಕೇವಲ ಜನನದ ಆಧಾರದ ಮೇಲೆ ತಂದೆಯ ಪಾಲಿನಲ್ಲಿ ಹಕ್ಕು ಸೃಷ್ಟಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹಾಗಾದರೆ ಮೊಮ್ಮಕ್ಕಳಿಗೆ ಅಜ್ಜನ ಆಸ್ತಿಯಲ್ಲಿ ಹಕ್ಕೇ ಇಲ್ಲವೇ?
ಈ ತೀರ್ಪಿನ ಪ್ರಕಾರ, ಅಜ್ಜನಿಂದ ತಂದೆಗೆ ಬಂದ ಪ್ರತಿಯೊಂದು ಆಸ್ತಿಯಲ್ಲೂ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕು ಇರುವುದಿಲ್ಲ. ಆದರೆ ಕುಟುಂಬದ ಜಂಟಿ ಆಸ್ತಿಯ ಸ್ವರೂಪ, ಆಸ್ತಿ ಹಂಚಿಕೆಯಾದ ವಿಧಾನ ಮತ್ತು ಅನ್ವಯಿಸುವ ಕಾನೂನಿನ ಆಧಾರದ ಮೇಲೆ ಹಕ್ಕು ನಿರ್ಧಾರವಾಗುತ್ತದೆ.
ಇನ್ನು ತಂದೆ ವಿಲ್ ಬರೆಯದೆ ಮೃತಪಟ್ಟರೆ, ಅವರ ಆಸ್ತಿಯಲ್ಲಿ ಮಗ, ಮಗಳು, ಪತ್ನಿ ಸೇರಿದಂತೆ ಮೊದಲನೇ ವರ್ಗದ ವಾರಸುದಾರರಿಗೆ ಕಾನೂನಿನ ಪ್ರಕಾರ ಪಾಲು ದೊರೆಯಬಹುದು.
ತೀರ್ಪಿನ ಮಹತ್ವವೇನು?
ಅಜ್ಜನ ಆಸ್ತಿ, ತಂದೆಯ ವೈಯಕ್ತಿಕ ಆಸ್ತಿ ಹಾಗೂ ಜಂಟಿ ಹಿಂದೂ ಕುಟುಂಬದ ಆಸ್ತಿಗಳ ನಡುವಿನ ಕಾನೂನು ವ್ಯತ್ಯಾಸವನ್ನು ಈ ತೀರ್ಪು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಕೇವಲ ಅಜ್ಜನಿಂದ ತಂದೆಗೆ ಆಸ್ತಿ ಬಂದಿದೆ ಎಂಬ ಕಾರಣಕ್ಕೆ ಮೊಮ್ಮಗನಿಗೆ ಅದರಲ್ಲಿ ಸ್ವಯಂಚಾಲಿತವಾಗಿ ಜನ್ಮಸಿದ್ಧ ಹಕ್ಕು ದೊರೆಯುವುದಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಒತ್ತಿಹೇಳಿದೆ.









