ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷ ಎಂ.ಕೆ. ಸ್ಟಾಲಿನ್ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ಔಪಚಾರಿಕವಾಗಿ ರವಾನಿಸಿರುವ ಸ್ಟಾಲಿನ್, ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಬಹುಮತ ಗಳಿಸಲು ವಿಫಲವಾದ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ.
ಇದರ ನಡುವೆಯೇ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ಟಿವಿಕೆ ನಾಯಕ ದಳಪತಿ ವಿಜಯ್, ಎರಡು ವಾರಗಳೊಳಗೆ ಬಹುಮತ ಸಾಬೀತುಪಡಿಸುವುದಾಗಿ ಘೋಷಿಸಿದ್ದಾರೆ. ರಾಜೀನಾಮೆ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸುದೀರ್ಘ ಸಂದೇಶ ಹಂಚಿಕೊಂಡಿರುವ ಸ್ಟಾಲಿನ್, ಡಿಎಂಕೆ ಮೈತ್ರಿಕೂಟಕ್ಕೆ ಮತ ನೀಡಿದ ಜನತೆಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
ತಮಿಳುನಾಡಿನ ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಅಮೂಲ್ಯ. ಇತ್ತೀಚಿನ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟಕ್ಕೆ 1 ಕೋಟಿ 54 ಲಕ್ಷಕ್ಕೂ ಹೆಚ್ಚು ಮತಗಳು ಲಭಿಸಿವೆ. ಪ್ರತಿಯೊಂದು ಮತವನ್ನೂ ನಾನು ಜನರ ವಿಶ್ವಾಸದ ಸಂಕೇತವಾಗಿ ಪರಿಗಣಿಸುತ್ತೇನೆ ಎಂದು ಅವರು ಬರೆದಿದ್ದಾರೆ.
ಗೆದ್ದ ಪಕ್ಷವು ಡಿಎಂಕೆಗಿಂತ ಕೇವಲ 17.43 ಲಕ್ಷ ಮತಗಳಷ್ಟು ಹೆಚ್ಚು ಮತ ಪಡೆದಿದ್ದು, ಮತ ಶೇಕಡಾವಾರು ಅಂತರ ಕೇವಲ 3.52 ಮಾತ್ರವಾಗಿದೆ ಎಂದು ಉಲ್ಲೇಖಿಸಿದ ಸ್ಟಾಲಿನ್, ಇದು ಜನರು ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಮತದಾರರನ್ನು ನೇರವಾಗಿ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸುವಂತೆ ಪಕ್ಷದ ಎಲ್ಲಾ ಗೆದ್ದ ಅಭ್ಯರ್ಥಿಗಳಿಗೆ ಸೂಚಿಸಿರುವ ಅವರು, “ಪ್ರಜಾಪ್ರಭುತ್ವದಲ್ಲಿ ಜನರೇ ಶ್ರೇಷ್ಠರು. ನಾವು ಅವರಿಗಾಗಿ ರಾಜಕೀಯ ಮಾಡುತ್ತೇವೆ,” ಎಂದು ಹೇಳಿದ್ದಾರೆ.
ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿರುವ ಸ್ಟಾಲಿನ್, ಡಿಎಂಕೆ ಈಗಲೂ ಬಲಿಷ್ಠ ರಾಜಕೀಯ ಶಕ್ತಿಯಾಗಿಯೇ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಿಎಂಕೆ ಆರು ಬಾರಿ ಅಧಿಕಾರಕ್ಕೆ ಬಂದಿದೆ. ನಾವು ಅನೇಕ ಗೆಲುವು-ಸೋಲುಗಳನ್ನು ಕಂಡಿದ್ದೇವೆ. ಆದರೆ ನಮ್ಮ ತತ್ವ ಮತ್ತು ಹೋರಾಟ ಎಂದಿಗೂ ಕುಂದುವುದಿಲ್ಲ ಎಂದು ಅವರು ಹೇಳಿದ್ದಾರೆ. ವಿರೋಧ ಪಕ್ಷದಲ್ಲಿದ್ದರೂ ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ ಸ್ಟಾಲಿನ್, ನಾವು ಮತ್ತೆ ಗೆಲ್ಲುತ್ತೇವೆ” ಎಂದು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಿದ್ದಾರೆ.



