ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ ಸ್ವಾಮೀಜಿ ಬೆಂಬಲಿಗರು ಮತ್ತು ಟ್ರಸ್ಟಿಗಳ ನಡುವಿನ ಗಲಾಟೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಠದಲ್ಲಿ ಸಭೆ, ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ನಡೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಮಠದಲ್ಲಿ ಕಳೆದ ಮಾರ್ಚ್ 10ರಿಂದ ಎರಡು ಬಣಗಳ ಬೆಂಬಲಿಗರು ಪ್ರತ್ಯೇಕವಾಗಿ ಸಭೆಗಳು, ಸಮಾರಂಭಗಳು ಹಾಗೂ ಸುದ್ದಿಗೋಷ್ಠಿಗಳನ್ನು ನಡೆಸುತ್ತಿದ್ದು, ಪರಿಸ್ಥಿತಿ ಉದ್ವಿಗ್ನ ಸ್ವರೂಪ ಪಡೆದುಕೊಂಡಿದೆ.
ಈ ಬೆಳವಣಿಗೆಗಳಿಂದ ಗಲಾಟೆ, ಪ್ರಚೋದನಕಾರಿ ಹೇಳಿಕೆಗಳು ಹಾಗೂ ಕಾನೂನು ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗುವ ಆತಂಕವೂ ವ್ಯಕ್ತವಾಗಿದೆ.
ಪೊಲೀಸ್ ಇಲಾಖೆ ಪದೇ ಪದೇ ಭದ್ರತೆ ಒದಗಿಸಲು ಸಾಧ್ಯವಿಲ್ಲದ ಹಿನ್ನೆಲೆ, ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಮೇ 1ರಿಂದ ಮೇ 30ರವರೆಗೆ ಮಠದಲ್ಲಿ ಯಾವುದೇ ಸಭೆ, ಸಮಾರಂಭ ಅಥವಾ ಪತ್ರಿಕಾಗೋಷ್ಠಿ ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಸಂಬಂಧ ಸ್ವಾಮೀಜಿ, ಟ್ರಸ್ಟಿಗಳು ಹಾಗೂ ಅವರ ಬೆಂಬಲಿಗರಿಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ನೋಟಿಸ್ ಜಾರಿಗೊಳಿಸಲಾಗಿದೆ.
ಇದೀಗ ಮೇ 5ರಂದು ಟ್ರಸ್ಟಿಗಳ ವಿರುದ್ಧ ಸ್ವಾಮೀಜಿ ಬೆಂಬಲಿಗರು ‘ಲೆಕ್ಕಕೊಡಿ’ ಅಭಿಯಾನ ಹಮ್ಮಿಕೊಳ್ಳಲು ಮುಂದಾಗಿದ್ದರು. ಏಪ್ರಿಲ್ 27ರಂದು ಟ್ರಸ್ಟಿಗಳು ಸುಳ್ಳು ಲೆಕ್ಕ ನೀಡಿದ್ದಾರೆ ಎಂದು ಆರೋಪಿಸಿರುವ ಬೆಂಬಲಿಗರು, ಪಾರದರ್ಶಕ ಲೆಕ್ಕಪತ್ರ ಮಂಡನೆಗೆ ಒತ್ತಾಯಿಸಲು ಸಜ್ಜಾಗಿದ್ದರು.
ಇದರ ಜೊತೆಗೆ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಭಕ್ತರು ನೀಡಿದ ಕಾಣಿಕೆಗಳ ವಿವರ ಸಂಗ್ರಹಿಸುವ ಅಭಿಯಾನಕ್ಕೂ ಅವರು ಮುಂದಾಗಿದ್ದಾರೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಭೆ ನಡೆಸಲು ಸ್ವಾಮೀಜಿ ಬೆಂಬಲಿಗರು ಯತ್ನಿಸಿರುವುದು ಮಠದ ಒಳಗಿರುವ ವಿವಾದ ಮತ್ತಷ್ಟು ತೀವ್ರಗೊಂಡಿರುವುದನ್ನು ಸೂಚಿಸಿದೆ.



