ಬೆಂಗಳೂರು/ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ತಿರುಚಾಟ ಆರೋಪ ಸಂಬಂಧ ಶಾಸಕ ಜೀವರಾಜ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಶಾಸಕ ಜೀವರಾಜ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶ್ರೀಶಾನಂದ ಅವರ ರಜಾಕಾಲದ ಪೀಠ ಇಂದು ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ವಿಶೇಷ ಸಾರ್ವಜನಿಕ ಅಭಿಯೋಜಕ ಬೆಳ್ಳಿಯಪ್ಪ ಅವರನ್ನು ಪ್ರಶ್ನಿಸಿತು.
“2023ರ ಮೇ 13ರಂದು ನಡೆದ ಘಟನೆಗೆ ಈಗ ಎಫ್ಐಆರ್ ದಾಖಲಿಸುವುದು ಹೇಗೆ ಸಾಧ್ಯ? ಮತಪತ್ರ ತಿರುಚಾಟ ನಡೆದಿದೆ ಎನ್ನುವ ಮಾಹಿತಿ ನ್ಯಾಯಾಲಯದ ಗಮನಕ್ಕೆ ತಂದುಕೊಳ್ಳದೆ ಈಗ ಪ್ರಕರಣ ದಾಖಲಿಸುತ್ತೀರಾ?” ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಇದಲ್ಲದೆ ತನಿಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, “ನಿಮಗೆ ಏನೂ ಕಾಣಿಸಲಿಲ್ಲವೇ? ಇಂತಹ ವಿಚಾರಗಳಲ್ಲಿ ಸಮರ್ಪಕವಾಗಿ ನಡೆದುಕೊಳ್ಳದಿದ್ದರೆ ಅಮಾನತು ಆದೇಶ ಬರೆಯಬೇಕಾಗುತ್ತದೆ,” ಎಂದು ಎಚ್ಚರಿಕೆ ನೀಡಿತು.
2023ರಲ್ಲಿ ಅಧಿಕಾರದಲ್ಲಿದ್ದ ಜಿಲ್ಲಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿರುವುದರ ಕುರಿತು ಪ್ರಶ್ನಿಸಿದ ನ್ಯಾಯಾಲಯ, “ಈಗಿನ ಚುನಾವಣಾಧಿಕಾರಿ ಗೌರವ್ ಶೆಟ್ಟಿ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ?” ಎಂದು ಪ್ರಶ್ನಿಸಿತು.
“ರಾಜಕೀಯ ಪ್ರಭಾವಕ್ಕೆ ಒಳಗಾಗಿ ಪೊಲೀಸರು ಎಫ್ಐಆರ್ ದಾಖಲಿಸಬಾರದು. ಹೈಕೋರ್ಟ್ ಆದೇಶದ ಮೇರೆಗೆ ಅಂಚೆ ಮತಗಳ ಮರುಎಣಿಕೆ ನಡೆದಿತ್ತು. ಮತಪತ್ರಗಳಲ್ಲಿ ಸೀಲ್ ಇಲ್ಲದಿದ್ದರೆ ಅಥವಾ ಡಬಲ್ ಟಿಕ್ ಇದ್ದರೆ, ಆ ಸಂದರ್ಭದಲ್ಲೇ ನ್ಯಾಯಾಲಯದ ಗಮನಕ್ಕೆ ಏಕೆ ತರಲಿಲ್ಲ?” ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಪ್ರಕರಣದಲ್ಲಿ ರಾಜೇಗೌಡ ಅವರ ಹೆಸರು ಇದ್ದರೂ ಕೂಡ ತಡೆ ನೀಡುತ್ತಿದ್ದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳು, ಪ್ರಜಾಪ್ರತಿನಿಧಿ ಕಾಯ್ದೆಯಡಿ ಜಿಲ್ಲಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಅವಕಾಶವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ನಡುವೆ ದೂರುದಾರ ಸುಧೀರ್ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದ್ದು, ಜೀವರಾಜ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸೂಚಿಸಿದೆ. ಎಫ್ಐಆರ್ಗೆ ಮಧ್ಯಂತರ ತಡೆ ನೀಡಿರುವ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿದೆ.



