ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ, ಅತಿ ಹಿಂದುಳಿದ ವರ್ಗದ ಜನರಿಗೆ ಅನ್ಯಾಯ ಆಗದಂತೆ ಕ್ರಮ; ಸಚಿವ ಪೂಜಾರಿ

Vijayasakshi (Gadag News) :

ವಿಜಯಸಾಕ್ಷಿ ಸುದ್ದಿ, ಬೆಂಗಳೂರು:

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಲೇಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಿದ್ದು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ವೇದಿಕೆಯ ಮನವಿಯಂತೆ ಸುಮಾರು 73 ಅತಿ ಹಿಂದುಳಿದ ಜಾತಿಗಳನ್ನು ಗುರುತಿಸಿ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ದೇವರಾಜು‌ ಅರಸು ಸಂಶೋಧನಾ ಪೀಠಕ್ಕೆ  ಅನುದಾನ ನೀಡಲಾಗುತ್ತದೆ ಎಂದ ಸಚಿವ ಪೂಜಾರಿ, ಅತಿ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ‌ವಿಚಾರವಾಗಿ ಯಾರಿಗೂ ಅನ್ಯಾಯವಾಗದಂತೆ ಸರಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

ಈಗಾಗಲೇ ಹಿಂದುಳಿದ ಆಯೋಗದ ಅಧ್ಯಕ್ಷರು, ಹಲವು ಸಮುದಾಯಗಳ ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದಾರೆ. ನಮ್ಮ ಸಮಾಜ ಇನ್ನೂ ಹೆಸರೇ ಕೇಳದ, ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಅದೆಷ್ಟೋ ಸಮುದಾಯಗಳ ಬದುಕು ದಾರುಣವಾಗಿದೆ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮೀಸಲಾತಿ ವಿಚಾರದಲ್ಲಿ ಮುಂದಿನ 15 ದಿನಗಳಲ್ಲಿ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ಸಚಿವರು ಭರವಸೆ ನೀಡಿದರು.

ಬಲಾಡ್ಯ ಸಮುದಾಯಗಳೂ ಸಹ ಆರ್ಥಿಕವಾಗಿ ಹಿಂದುಳಿದಿರುವುದಾಗಿ ಕೇಂದ್ರಕ್ಕೆ ಅಹವಾಲು ಸಲ್ಲಿಸಲಾಗುವುದು. ಆದರೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಸಚಿವ ಪೂಜಾರಿ ಹೇಳಿದರು.

ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತಾಗಿ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ. ದೇವರಾಜ ಅರಸು ಅವರ ಭೂಸುಧಾರಣೆ ಯೋಜನೆಯ ಫಲಾನುಭವಿ ನಾನು, ಅವತ್ತು ನನಗೆ 2 ಎಕರೆ ಭೂಮಿ ಸಿಕ್ಕಿತ್ತು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಮರಿಸಿಕೊಂಡರು.  

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರಾದ ಎಂ ಸಿ ವೇಣುಗೋಪಾಲ ಮಾತನಾಡಿ, ಒಂದು ವೇಳೆ ವೀರಶೈವ ಲಿಂಗಾಯಿತದ ಉಪಜಾತಿಯಾದ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಪಟ್ಟಿಗೆ ಸೇರಿಸಿದರೆ ಹಿಂದುಳಿದ ಸಮುದಾಯಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.  

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಪಿ.ಆರ್‌ ರಮೇಶ್‌, ಮಾಜಿ ಶಾಸಕ ಹಾಗೂ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ನೆ.ಲ ನರೇಂದ್ರಬಾಬು ಸೇರಿದಂತೆ ಹಲವರು ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಲು ತಾಂತ್ರಿಕ ಅಡೆತಡೆಯಿದೆ. 2ಎ ಮೀಸಲಾತಿ ನೀಡಿದರೆ ಅತಿ ಹಿಂದುಳಿದ ಸಮುದಾಯಕ್ಕೆ ಘೋರ ಅನ್ಯಾಯವಾಗುತ್ತದೆ. ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎ-ಗೆ ಸೇರಿಸಬಾರದೆಂದು ಒಕ್ಕೂರಲಿನಿಂದ ಸಚಿವರ ಬಳಿ ಮನವಿ ಮಾಡಿಕೊಂಡರು.

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಬಳಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ, ಪ್ರಮುಖ ಬೇಡಿಕೆಗಳ ಮನವಿ ಪತ್ರ ನೀಡಲಾಯಿತು. ಹೆಚ್. ಕಾಂತರಾಜ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿರುವ ಸಮಾಜೋ-ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಕೂಡಲೇ ಸ್ವೀಕರಿಸಿ ಬಹಿರಂಗ ಪಡಿಸಬೇಕು. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-2ಎಗೆ ಸೇರ್ಪಡೆ ಗೊಳಿಸಬಾರದು.  ನ್ಯಾಯಮೂರ್ತಿ ಸುಭಾಷ್ ಆಡಿ ಸಮಿತಿಯಿಂದ ಪಂಚಮಸಾಲಿ ವಿಷಯ ಹಿಂಪಡೆಯಬೇಕು. ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸುಮಾರು 70 ಜಾತಿ-ಉಪಜಾತಿಗಳನ್ನು ಸೇರ್ಪಡೆಗೆ ಶಿಫಾರಸ್ಸು ಮಾಡಬೇಕು. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಅತಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ‌ ನೀಡಬೇಕು. ಸಮಾಜದ ಅಲಕ್ಷಿತ ಅತಿ ಹಿಂದುಳಿದ ಸಮುದಾಯಗಳ ಸಾಮಾಜಿಕ ಸುಧಾರಣೆಗೆ ಸರ್ಕಾರ ಬದ್ಧವಾಗಬೇಕು ಎಂಬ ಬೇಡಿಕೆಗಳನ್ನೊಳಗೊಂಡ ಮನವಿ ನೀಡಲಾಯಿತು.

ಸಭೆಗೂ ಮುನ್ನ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ 2ನೇ ಕಾರ್ಯಕಾರಿ ಮಂಡಳಿ ಸಭೆ ನಡೆಯಿತು. ಇತ್ತೀಚೆಗೆ ನಿಧನರಾದ ಹಿರಿಯ ಮುತ್ಸದ್ದಿ ರಾಜಕಾರಣಿ, ಮಾಜಿ ರಾಜ್ಯ ಮತ್ತು ಕೇಂದ್ರ ಸಚಿವ, ಹಿಂದುಳಿದ ಸಮುದಾಯಗಳ ನಾಯಕ ಆರ್‌.ಎಲ್‌ ಜಾಲಪ್ಪನವರಿಗೆ ಶ್ರದ್ಧಾಂಜಲಿ ಕೋರಲಾಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಹಾನಗಲ್‌ ಶಾಸಕ ಶ್ರೀನಿವಾಸ್‌ ಮಾನೆ ಮಾತನಾಡಿ, ಸಂಘಟನೆಯಿಂದ ವಂಚಿತರಾಗಿ ಛಿದ್ರವಾಗಿರುವ ಅತಿ ಹಿಂದುಳಿದ ವರ್ಗಗಳಿಗೆ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ವೇದಿಕೆ ದೊಡ್ಡ ಭರವಸೆಯಾಗಿದೆ.

ಮುಂದಿನ ದಿನಗಳಲ್ಲಿ ಅತಿ ಹಿಂದುಳಿದ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಯ ನಿರೀಕ್ಷೆಯನ್ನು ಖಂಡಿತಾ ಇಟ್ಟುಕೊಳ್ಳಬಹುದು. ಓರ್ವ ಶಾಸನ ಸಭೆಯ ಪ್ರತಿನಿಧಿಯಾಗಿ ಸಂಘಟನೆಗೆ ಸಾಧ್ಯವಿರುವ ಎಲ್ಲಾ ಅಗತ್ಯ ಕೆಲಸಗಳಿಗೂ ಬದ್ಧನಿದ್ದೇನೆ ಎಂದರು.

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಮೊಮ್ಮಗ ಸೂರಜ್, ನಿವೃತ್ತ ಐಎಎಸ್‌ ಅಧಿಕಾರಿ ಶ್ರೀನಿವಾಸ ಆಚಾರಿ, ನಿವೃತ್ತ ಐಎಎಸ್‌ ಅಧಿಕಾರಿ ಎಸ್‌ ಪುಟ್ಟಸ್ವಾಮಿ, ಕೆಎಎಸ್‌ ಅಧಿಕಾರಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆಎನ್‌ ಲಿಂಗಪ್ಪ, ವಿಧಾನ ಪರಿಷತ್‌ ಮಾಜಿ ಶಾಸಕ ತಿಪ್ಪಣ್ಣ, ವೇದಿಕೆಯ ಖಜಾಂಚಿ ಎಲ್‌.ಎ ಮಂಜುನಾಥ್‌, ಪ್ರಧಾನ ಕಾರ್ಯದರ್ಶಿ ಎಂ ನಾಗರಾಜ್‌, ಕಲಗೋಡು ರತ್ನಾಕರ್, ಶೋಭಾ, ಯಲ್ಲಪ್ಪ, ಕೆಎಸ್‌ ದುಶ್ಯಂತ, ಚಂದ್ರಶೇಖರ್‌ ಪಿ, ಮಂಜುನಾಥ್‌ ಎಸ್‌, ಪಲ್ಗುಣ, ಚಿದಾನಂದ ಬಡಿಗೇರಾ, ಕೆಎನ್‌ ಅಶೋಕ, ಶಿವಾನಂದ ಲಕ್ಷ್ಮಣ ಪಾಚಂಗಿ, ಗೋಪಿನಾಥ ರಾಜು, ಎಲ್‌ ಶಿವಶಂಕರ್‌, ಶಿವು ಯಾದವ್‌, ಗೋ ತಿಪ್ಪೇಶ್‌, ಗಣೇಶ್‌ ರಾವ್‌, ವರದರಾಜು, ಸತ್ಯನಾರಾಯಣ ರಾಜು, ದಿನೇಶ್‌ ಅರಸು, ಪದ್ಮನಾಭ್‌, ಚಂದ್ರಾನಾಯಕ್‌, ದೇವರಾಜು, ಶಂಕ್ರಪ್ಪ, ಚೆನ್ನಕೇಶವ ಮುಂತಾದವರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ