ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗೋಪಿನಾಥಂ ಕಾವೇರಿ ವನ್ಯಧಾಮದಲ್ಲಿ ಗಾಯಗೊಂಡಿದ್ದ ಗಂಡಾನೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಕೆಲ ದಿನಗಳ ಹಿಂದೆ ಜಲಾಶಯಕ್ಕೆ ನೀರು ಕುಡಿಯಲು ಬಂದಿದ್ದ ವೇಳೆ ಕಾಡಾನೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚಿಕಿತ್ಸೆಯನ್ನು ಆರಂಭಿಸಿದ್ದರು.
ಗಾಯಗೊಂಡಿದ್ದ ಆನೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ನಿರಂತರ ನಿಗಾವಹಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಂಡಾನೆ ಕೊನೆಯುಸಿರೆಳೆದಿದೆ. ಕಾಡಾನೆಯ ಸಾವಿನಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.
ಕಾಡಾನೆ ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಚಲನವಲನ ಹೆಚ್ಚಾಗಿರುವ ಹಿನ್ನೆಲೆ ಇಲಾಖೆ ಹೆಚ್ಚುವರಿ ನಿಗಾ ವಹಿಸಿದೆ.



