ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಕೊರಕೋಡು ಕ್ರಾಸ್ ಸಮೀಪ ಕೆರೆಯ ಏರಿಯ ಮೇಲೆ ಮದುವೆ ದಿಬ್ಬಣದ ಖಾಸಗಿ ಬಸ್ ಪಲ್ಟಿಯಾದ ಘಟನೆ ನಡೆದಿದೆ. ಸಿದ್ದಾಪುರದಿಂದ ಹಾನಗಲ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ಪ್ರಯಾಣಿಕರ ಬಸ್ ಅಪಘಾತಕ್ಕೀಡಾಗಿದೆ.
ಆನವಟ್ಟಿ–ಸೊರಬ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ಕೆರೆ ಏರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಮೋರಿಗೆ ಮಗುಚಿ ಬಿದ್ದಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದ್ದು, ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್‌ನಲ್ಲಿ ಸುಮಾರು 50 ಮಂದಿ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ.
ಗಾಯಾಳುಗಳನ್ನು ತಕ್ಷಣ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.



