ಚಿತ್ರದುರ್ಗ: ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನವನ್ನು ಆಚರಿಸಲು ಚಿತ್ರದುರ್ಗದಲ್ಲಿ ಭಾರೀ ಅಭಿಮಾನೋತ್ಸವ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕಾಗಿ ಮಾದಾರ ಚೆನ್ನಯ್ಯ ಮಠದ ಸಮೀಪ ನಿರ್ಮಿಸಿರುವ ಬೃಹತ್ ವೇದಿಕೆ ಮತ್ತು ಕೋಟೆ ಮಾದರಿಯ ಪ್ರವೇಶ ದ್ವಾರಗಳು ಗಮನ ಸೆಳೆಯುತ್ತಿವೆ.
ವೇದಿಕೆ ಸುತ್ತಮುತ್ತ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಯಡಿಯೂರಪ್ಪ ಅವರ ಭಾರೀ ಕಟೌಟ್‌ಗಳನ್ನು ಅಳವಡಿಸಲಾಗಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮನೆ ಮಾಡಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಕಾರ್ಯಕ್ರಮಕ್ಕೆ ಆಗಮಿಸುವ ಸಾಧ್ಯತೆ ಇದೆ.
ಜನಸಾಗರವನ್ನು ಗಮನದಲ್ಲಿಟ್ಟುಕೊಂಡು ಭೋಜನ ವ್ಯವಸ್ಥೆಯನ್ನೂ ಅದ್ದೂರಿಯಾಗಿ ಮಾಡಲಾಗಿದೆ. 1,250ಕ್ಕೂ ಹೆಚ್ಚು ಬಾಣಸಿಗರು ಅಡುಗೆ ಕಾರ್ಯದಲ್ಲಿ ನಿರತರಾಗಿದ್ದು, ಮೈಸೂರ್ ಪಾಕ್, ಪಲಾವ್, ಮೆಂತ್ಯ ಪಲಾವ್, ಟೊಮೆಟೊ ಬಾತ್, ಮೊಸರನ್ನ ಸೇರಿದಂತೆ ಹಲವು ಬಗೆಯ ಊಟ ಸಿದ್ಧಪಡಿಸಲಾಗುತ್ತಿದೆ. ಕಾರ್ಯಕ್ರಮ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿದೆ.



