ಗಾಂಧೀನಗರ: ಗುಜರಾತಿನ ಗಾಂಧೀನಗರದಲ್ಲಿ ಸೋಮನಾಥ ದೇವಾಲಯದ 75ನೇ ವರ್ಷದ ಅಮೃತ ಮಹೋತ್ಸವ ಭವ್ಯವಾಗಿ ಆಚರಿಸಲಾಯಿತು. ಈ ವಿಶೇಷ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಕುಂಭಾಭಿಷೇಕ ನೆರವೇರಿಸಿದರು.
ಭಾರತದ 12 ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯವು ದೇಶದ ಆಧ್ಯಾತ್ಮಿಕ ಪರಂಪರೆಯ ಮಹತ್ವದ ಸಂಕೇತವಾಗಿದೆ. ಪುನರ್ನಿರ್ಮಾಣಗೊಂಡ ಈ ಐತಿಹಾಸಿಕ ದೇವಾಲಯ 75 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವವನ್ನು ವಿಶೇಷವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಪ್ರಧಾನಿ ಮೋದಿ, ಭಾರತದ 11 ಪವಿತ್ರ ಯಾತ್ರಾ ಕ್ಷೇತ್ರಗಳಿಂದ ಸಂಗ್ರಹಿಸಲಾದ ಪವಿತ್ರ ನೀರಿನಿಂದ ದೇವಾಲಯಕ್ಕೆ ಕುಂಭಾಭಿಷೇಕ ನೆರವೇರಿಸಿದರು. ಬಳಿಕ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಸೋಮನಾಥನಿಗೆ ಪ್ರಾರ್ಥನೆ ಸಲ್ಲಿಸಿದರು.
ಅದ್ಧೂರಿ ಆಚರಣೆಯ ಭಾಗವಾಗಿ ಭಾರತೀಯ ವಾಯುಪಡೆಯ ಪ್ರಸಿದ್ಧ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ ನೀಡಿದ ಮನಮೋಹಕ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ಮೋದಿ ವೀಕ್ಷಿಸಿದರು. ಈ ಪ್ರದರ್ಶನ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಸೇರಿದಂತೆ ಗಣ್ಯರು ಪ್ರಧಾನಿ ಮೋದಿ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಸೋಮನಾಥ ದೇವಾಲಯದ ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಸ್ಮರಿಸುವ ಸ್ಮರಣಾರ್ಥ ಅಂಚೆ ಚೀಟಿ ಹಾಗೂ ವಿಶೇಷ ನಾಣ್ಯವನ್ನು ಮೋದಿ ಬಿಡುಗಡೆ ಮಾಡಿದರು.
ಸೋಮನಾಥ ದೇಗುಲ ತಲುಪುವ ಮುನ್ನ ಪ್ರಧಾನಿ ಮೋದಿ ರೋಡ್ ಶೋ ನಡೆಸಿ ಜನರ ಅಭಿನಂದನೆ ಸ್ವೀಕರಿಸಿದರು. ದೇವಾಲಯದ ಕಾರ್ಯಕ್ರಮದ ಬಳಿಕ ಸಂಜೆ ವಡೋದರಾಕ್ಕೆ ಭೇಟಿ ನೀಡಲಿರುವ ಪ್ರಧಾನಿ, ಅಲ್ಲಿನ ಸರ್ದಾರ್ ಧಾಮ್ ಹಾಸ್ಟೆಲ್ ಉದ್ಘಾಟಿಸಲಿದ್ದಾರೆ.



