ಕೊಪ್ಪಳ: ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ 2.50 ಕೋಟಿ ಮೌಲ್ಯದ ಚಿನ್ನದ ಆಭರಣ ದೇಣಿಗೆ ನೀಡಿದ್ದಾಗಿ ಹೇಳಿದ್ದ ಉದ್ಯಮಿ ಮಹೇಶ ರೆಡ್ಡಿಗೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ. ತಪಾಸಣೆಯಲ್ಲಿ ಆಭರಣಗಳು ಸಂಪೂರ್ಣ ಚಿನ್ನದವಲ್ಲ ಎಂಬುದು ಬೆಳಕಿಗೆ ಬಂದಿದೆ.
ಹೈದರಾಬಾದ್ ಮೂಲದ ಎಎಂಆರ್ ಗ್ರೂಪ್ ಅಧ್ಯಕ್ಷ ಮಹೇಶ ರೆಡ್ಡಿ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸಮ್ಮುಖದಲ್ಲಿ ಪ್ರಭಾವಳಿ, ಕಿರೀಟ ಮತ್ತು ಗದೆಯನ್ನು ದೇಣಿಗೆಯಾಗಿ ನೀಡಿದ್ದರು. ಅಂಜನಾದ್ರಿಯನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ದೇಣಿಗೆ ನೀಡಲಾಗಿದೆ ಎಂದು ಹೇಳಲಾಗಿತ್ತು.
ಆದರೆ ಜಿಲ್ಲಾಡಳಿತ ಪರಿಶೀಲನೆ ವೇಳೆ ಆಭರಣಗಳಲ್ಲಿ ಕೇವಲ 28 ಗ್ರಾಂ ಬಂಗಾರ ಮಾತ್ರ ಇರುವುದಾಗಿ ಪತ್ತೆಯಾಗಿದೆ. ಉಳಿದ ಭಾಗ ತಾಮ್ರದ ಮೇಲೆ ಗೋಲ್ಡ್ ಪ್ಲೇಟಿಂಗ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಭರಣಗಳ ನಿಖರ ಮೌಲ್ಯ ಮತ್ತು ಚಿನ್ನದ ಪ್ರಮಾಣದ ಬಗ್ಗೆ ಅಧಿಕೃತ ದಾಖಲೆಗಳಿಲ್ಲದ ಕಾರಣ ಖಜಾನೆಗೆ ಸೇರಿಸಿಕೊಳ್ಳುವುದನ್ನು ಜಿಲ್ಲಾಡಳಿತ ತಡೆಹಿಡಿದಿದೆ. ಸಂಬಂಧಪಟ್ಟ ಬಿಲ್ ಮತ್ತು ದಾಖಲೆಗಳನ್ನು ಸಲ್ಲಿಸುವಂತೆ ಮಹೇಶ ರೆಡ್ಡಿಗೆ ಸೂಚನೆ ನೀಡಲಾಗಿದೆ.
ಈ ಬೆಳವಣಿಗೆ ಭಕ್ತರಲ್ಲಿ ಆಕ್ರೋಶ ಮತ್ತು ಅನುಮಾನಕ್ಕೆ ಕಾರಣವಾಗಿದ್ದು, ದೇವಸ್ಥಾನ ದೇಣಿಗೆಗಳ ಪಾರದರ್ಶಕತೆ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ.



