ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ 73 ವರ್ಷಗಳ ಬಳಿಕ ನಡೆದ ಕ್ರೆಸ್ಟ್ ಗೇಟ್ ಬದಲಾವಣೆ ಕಾರ್ಯ ದೇಶದ ನೀರಾವರಿ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿ ಗುರುತಿಸಿಕೊಂಡಿದೆ. 33 ನೂತನ ಗೇಟ್‌ಗಳ ಲೋಕಾರ್ಪಣೆ ಗುರುವಾರ ಅಧಿಕೃತವಾಗಿ ನೆರವೇರಿಸಲಾಯಿತು.
ಮುನಿರಾಬಾದ್ ಸಮೀಪದ ಜಲಾಶಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಜಲಶಕ್ತಿ ಸಚಿವರು ಒಂದೇ ವೇದಿಕೆಯಲ್ಲಿ ಭಾಗವಹಿಸಿದ್ದು ಅಪರೂಪದ ರಾಜಕೀಯ ಹಾಗೂ ಆಡಳಿತಾತ್ಮಕ ಸಮಾಗಮವಾಗಿ ಗಮನ ಸೆಳೆಯಿತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎನ್. ಚಂದ್ರಬಾಬು ನಾಯ್ಡು, ಎ. ರೇವಂತ್ ರೆಡ್ಡಿ ಹಾಗೂ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಮುಖ ಹಂತವಾಗಿ 18 ರಿಂದ 21ನೇ ಕ್ರೆಸ್ಟ್ ಗೇಟ್‌ಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ರಿಮೋಟ್ ಮೂಲಕ ನೂತನ ಗೇಟ್‌ಗಳ ಉದ್ಘಾಟನೆ ನಡೆಯಿತು. ನಾಲ್ವರು ನಾಯಕರು ಪ್ರತ್ಯೇಕವಾಗಿ ಗೇಟ್‌ಗಳನ್ನು ಚಾಲನೆಗೊಳಿಸಿದರು.
ಈ ನವೀಕರಣದ ಹಿನ್ನೆಲೆ 2024ರ ಆಗಸ್ಟ್‌ನಲ್ಲಿ 19ನೇ ಗೇಟ್ ಕೊಚ್ಚಿ ಹೋಗಿದ್ದ ಘಟನೆ ಪ್ರಮುಖ ಕಾರಣವಾಗಿತ್ತು. ಅದರ ನಂತರ ಕೇಂದ್ರ ಜಲಶಕ್ತಿ ಆಯೋಗ ಹಾಗೂ ಡ್ಯಾಂ ಸುರಕ್ಷತಾ ತಂಡ ನಡೆಸಿದ ತಾಂತ್ರಿಕ ಪರಿಶೀಲನೆ ಆಧಾರವಾಗಿ 33 ಗೇಟ್‌ಗಳನ್ನು ಬದಲಾಯಿಸಲು ಶಿಫಾರಸು ಮಾಡಲಾಗಿತ್ತು. ಸುಮಾರು 51 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಪೂರ್ಣಗೊಂಡಿದೆ. ಹಳೆಯ ಗೇಟ್‌ಗಳು 1953ರಿಂದ ಸೇವೆಯಲ್ಲಿ ಇದ್ದವು ಎಂಬುದು ಅಧಿಕಾರಿಗಳ ಮಾಹಿತಿ.
ಪ್ರತಿ ಗೇಟ್ 20 ಅಡಿ ಎತ್ತರ, 60 ಅಡಿ ಅಗಲ ಹಾಗೂ 48.50 ಟನ್ ತೂಕ ಹೊಂದಿದ್ದು, ಜಲಾಶಯದ ಸುರಕ್ಷತೆ ಹಾಗೂ ನೀರಿನ ನಿಯಂತ್ರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ.
ಕಾರ್ಯಕ್ರಮದ ಸಂದರ್ಭದಲ್ಲಿ ನವಲಿ ಸಮಾನಾಂತರ ಜಲಾಶಯ, ಹೂಳು ಸಮಸ್ಯೆ ಹಾಗೂ ನೆನೆಗುದಿಗೆ ಬಿದ್ದ ನೀರಾವರಿ ಯೋಜನೆಗಳ ಕುರಿತು ಅನೌಪಚಾರಿಕ ಚರ್ಚೆ ನಡೆದಿರುವ ಸಾಧ್ಯತೆಯೂ ಇದೆ. ಈ ಕುರಿತು ಕರ್ನಾಟಕ ಸರ್ಕಾರ ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಿರುವುದು ಗಮನಾರ್ಹ.
ಸಾವಿರಾರು ರೈತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮಕ್ಕಾಗಿ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ನೀರಾವರಿ ತಜ್ಞ ಕನ್ನಯ್ಯ ನಾಯ್ಡು ಸಹ ಉಪಸ್ಥಿತರಿದ್ದು ತಾಂತ್ರಿಕ ಪ್ರಕ್ರಿಯೆಯಲ್ಲಿ ಭಾಗವಹಿಸಿದರು.



