ಬೆಂಗಳೂರು: ಶೃಂಗೇರಿ ಕ್ಷೇತ್ರದ ಹೈವೋಲ್ಟೇಜ್ ಮರುಮತ ಎಣಿಕೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಭಾರೀ ಟ್ವಿಸ್ಟ್ ನೀಡಿದೆ. ಬಿಜೆಪಿ ನಾಯಕ ಜೀವರಾಜ್ ಅವರ ಗೆಲುವಿನ ಮೇಲೆ ತಾತ್ಕಾಲಿಕ ಬ್ರೇಕ್ ಹಾಕಿರುವ ಕೋರ್ಟ್, ಮರುಮತ ಎಣಿಕೆ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿದೆ.
ಕಾಂಗ್ರೆಸ್ ನಾಯಕ ಟಿ.ಡಿ. ರಾಜೇಗೌಡ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 21ಕ್ಕೆ ನಿಗದಿ ಮಾಡಿದೆ. ಇದರಿಂದ ಶೃಂಗೇರಿ ಕ್ಷೇತ್ರದ ರಾಜಕೀಯ ಕದನ ಮತ್ತಷ್ಟು ತೀವ್ರಗೊಂಡಿದೆ.
ಕೋರ್ಟ್ ಆದೇಶದ ಬಳಿಕ ಮಾತನಾಡಿದ ಜೀವರಾಜ್, “ಇದು ಅಂತಿಮ ತೀರ್ಪಲ್ಲ. ಮಧ್ಯಂತರ ಆದೇಶ ಮಾತ್ರ. ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸವಿದೆ. ರಾಜಕೀಯದಲ್ಲಿ ಇಂತಹ ಏರುಪೇರು ಸಾಮಾನ್ಯ” ಎಂದು ಹೇಳಿದ್ದಾರೆ.
ತಡೆಯಾಜ್ಞೆಯಿಂದಾಗಿ ಸದ್ಯ ಹಾಲಿ ಶಾಸಕರೇ ಮುಂದುವರಿಯಲಿದ್ದು, ಅಂತಿಮ ತೀರ್ಪಿನತ್ತ ರಾಜ್ಯ ರಾಜಕೀಯ ಕಣ್ಣು ನೆಟ್ಟಿದೆ. ಶೃಂಗೇರಿ ಕ್ಷೇತ್ರದ ಈ ಕಾನೂನು ಸಮರ ಈಗ ರಾಜ್ಯ ರಾಜಕೀಯದ ಅತ್ಯಂತ ಕುತೂಹಲಕರ ಕೇಸ್ ಆಗಿ ಪರಿಣಮಿಸಿದೆ.



