ನವದೆಹಲಿ: ಚಲಿಸುತ್ತಿದ್ದ ಖಾಸಗಿ ಬಸ್ಸಿನೊಳಗೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪ ದೆಹಲಿಯ ನಂಗ್ಲೋಯಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿ ದೆಹಲಿ ಪೊಲೀಸರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನ ಪ್ರಕಾರ, ಸೋಮವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಅವರು ಎಂದಿನಂತೆ ಕೆಲಸ ಮುಗಿಸಿ ಸರಸ್ವತಿ ವಿಹಾರ್ ಬಿ-ಬ್ಲಾಕ್ ಬಸ್ ನಿಲ್ದಾಣದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಅಲ್ಲೇ ನಿಂತಿದ್ದ ಸ್ಲೀಪರ್ ಬಸ್ನ ಬಾಗಿಲ ಬಳಿ ನಿಂತಿದ್ದ ನಿರ್ವಾಹಕರನ್ನು ಸಮಯ ಕೇಳಲು ಅವರು ಹತ್ತಿರ ಹೋಗಿದ್ದಾರೆ.
ಆ ಸಂದರ್ಭದಲ್ಲಿ ಆರೋಪಿಗಳು ಮಹಿಳೆಯನ್ನು ಬಲವಂತವಾಗಿ ಬಸ್ಸಿನೊಳಗೆ ಎಳೆದುಕೊಂಡು ಹೋಗಿ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯ ವೇಳೆ ಬಸ್ ದೆಹಲಿಯ ರಾಣಿಬಾಗ್ ಪ್ರದೇಶದವರೆಗೆ ಸುಮಾರು 7 ಕಿಲೋಮೀಟರ್ಗಳಷ್ಟು ಚಲಿಸಿದ್ದು, ಈ ಅವಧಿಯಲ್ಲಿ ಕೃತ್ಯ ಎಸಗಲಾಗಿದೆ ಎನ್ನಲಾಗಿದೆ.
ನಂತರ ತಡರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಮಹಿಳೆಯನ್ನು ಬಸ್ಸಿನಿಂದ ಹೊರಗೆ ತಳ್ಳಲಾಗಿದೆ. ಇದರಿಂದ ಮಹಿಳೆಗೆ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಾದ ಬಸ್ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಬಳಸಿದ ಖಾಸಗಿ ಬಸ್ ಅನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ಈ ಘಟನೆ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಪೊಲೀಸರು ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.



