ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪಹರ್ಗಂಜ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲ್ಛಾವಣಿಯ ಸ್ಲ್ಯಾಬ್ ಕುಸಿದು ಎಂಟು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

ಪಹರ್ಗಂಜ್ನ ಸಂಗತ್ರಾಶನ್ ಪ್ರದೇಶದಲ್ಲಿರುವ ಸರ್ಕಾರಿ ಬಾಲಕಿಯರ ಹಿರಿಯ ಪ್ರೌಢಶಾಲೆಯ ಎದುರಿನ ಕಟ್ಟಡದಲ್ಲಿ ಹೋಟೆಲ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಕಟ್ಟಡದ ಎರಡನೇ ಮಹಡಿಯ ಮೇಲ್ಛಾವಣಿಗೆ ಸ್ಲ್ಯಾಬ್ ಹಾಕುವ ಸಂದರ್ಭದಲ್ಲಿ ಕಟ್ಟಡದ ಒಂದು ಭಾಗ ಏಕಾಏಕಿ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಪಹರ್ಗಂಜ್ ಪೊಲೀಸ್ ಠಾಣೆಗೆ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಮಾಹಿತಿ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಘಟನೆಯಲ್ಲಿ ಗಾಯಗೊಂಡ ಎಂಟು ಮಂದಿಯನ್ನು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳನ್ನು ಶೇಖ್ ಸದ್ದಾಂ (37), ಶೇಖ್ ರಾಜಾ (20), ಮೊಹಮ್ಮದ್ ಸುಹೇಲ್ (50), ಸಂಜುದ್ ಖಾನ್ (40), ಗೌತಮ್ ಯಾದವ್ (28), ವರುಣ್ ಯಾದವ್ (36), ರಾಜಾ (36) ಮತ್ತು ಮಂಟ್ಸು (40) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಕೆಲವರಿಗೆ ಮೂಳೆ ಮುರಿತವಾಗಿದ್ದು, ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.
ಕಟ್ಟಡದ ಸ್ಥಿರತೆ ಬಗ್ಗೆ ಆತಂಕ:
ಪ್ರಾಥಮಿಕ ಪರಿಶೀಲನೆ ವೇಳೆ ಕಟ್ಟಡದ ಆಧಾರ ಸ್ತಂಭಗಳು ತೇವವಾಗಿರುವುದು ಕಂಡುಬಂದಿದೆ. ಅಲ್ಲದೆ, ಕಟ್ಟಡ ಒಂದು ಬದಿಗೆ ವಾಲಿದಂತೆ ಕಾಣಿಸಿಕೊಂಡಿದ್ದು, ಅದರ ಸ್ಥಿರತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಕಟ್ಟಡ ಕುಸಿತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಭಾನುವಾರ ಸಂಜೆ 4.40ರ ಸುಮಾರಿಗೆ ಕಟ್ಟಡ ಕುಸಿತದ ಬಗ್ಗೆ ದೆಹಲಿ ಅಗ್ನಿಶಾಮಕ ಇಲಾಖೆಗೆ ಕರೆ ಬಂದಿತ್ತು. ತಕ್ಷಣ ಎರಡು ಅಗ್ನಿಶಾಮಕ ವಾಹನಗಳು ಹಾಗೂ ತುರ್ತು ಪ್ರತಿಕ್ರಿಯಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮೊದಲೇ ಪೊಲೀಸರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖೆ ಮತ್ತು ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.










