ಬೆಂಗಳೂರು: ಕೆಲಸ ಮಾಡಿದ ಸಂಬಳ ನೀಡುವಂತೆ ಕೇಳಿದ್ದಲ್ಲದೆ, ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದ ವಾಟರ್ ಟ್ಯಾಂಕರ್ ಚಾಲಕನನ್ನು ಆತನ ಮಾಲೀಕನೇ ಸಹಚರರೊಂದಿಗೆ ಸೇರಿ ಅಪಹರಿಸಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈ ಸಂಬಂಧ ಜೀವನ್ ಭೀಮಾ ನಗರ ಪೊಲೀಸರು ಮಾಲೀಕ ಶ್ರೀನಿವಾಸ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ.
ಹಲ್ಲೆಗೊಳಗಾದ ಮೋಹನ್ ಕಳೆದ ಎರಡೂವರೆ ವರ್ಷಗಳಿಂದ ಶ್ರೀನಿವಾಸ್ ಎಂಬುವವರ ಬಳಿ ವಾಟರ್ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಕಳೆದ ಏಳು ತಿಂಗಳಿಂದ ಮಾಲೀಕ ಸಂಬಳ ನೀಡದೆ ಬಾಕಿ ಉಳಿಸಿಕೊಂಡಿದ್ದ ಎನ್ನಲಾಗಿದೆ. ಸುಮಾರು 2 ಲಕ್ಷ ರೂಪಾಯಿ ಸಂಬಳ ಬರಬೇಕಿದ್ದ ಹಿನ್ನೆಲೆಯಲ್ಲಿ ಮೋಹನ್ ಒಂದೂವರೆ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಬಳಿಕ ಬಾಕಿ ಹಣ ಕೊಡಿಸುವಂತೆ ಜೀವನ್ ಭೀಮಾ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದ.
ಇತ್ತೀಚೆಗೆ ದೂರಿನ ವಿಚಾರಣೆಗಾಗಿ ಪೊಲೀಸರು ಕರೆದಿದ್ದಾರೆ ಎಂದು ಠಾಣೆಗೆ ತೆರಳಲು ಮೋಹನ್ ಮನೆಯ ಬಳಿ ಸಿದ್ಧನಾಗುತ್ತಿದ್ದ. ಈ ವೇಳೆ ಮಾಲೀಕ ಶ್ರೀನಿವಾಸ್ ಮತ್ತು ಆತನ ಸಹಚರರು ಅಲ್ಲಿಗೆ ಬಂದಿದ್ದಾರೆ. ಮಾತುಕತೆಗೆ ಬಂದಿರಬಹುದು ಎಂದು ಮೋಹನ್ ಭಾವಿಸುವಷ್ಟರಲ್ಲಿ, ಆರೋಪಿಗಳು ಏಕಾಏಕಿ ಆತನ ತಲೆಗೆ ರಾಡ್ನಿಂದ ಹಲ್ಲೆ ನಡೆಸಿ, ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಅಪಹರಿಸಿದ್ದಾರೆ.
ಕಾರಿನ ಡಿಕ್ಕಿಯಲ್ಲಿ ಕೂಡಿ ಹಾಕಿ ಹಲ್ಲೆ:
ಅಪಹರಣದ ವೇಳೆ ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನದಿಂದ ಆರೋಪಿಗಳು ಮೋಹನ್ನನ್ನು ಕಾರಿನ ಡಿಕ್ಕಿಯಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ನಿರ್ಜನ ಪ್ರದೇಶಗಳಲ್ಲಿ ಕಾರು ನಿಲ್ಲಿಸಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಮೋಹನ್ ಪ್ರಜ್ಞೆ ತಪ್ಪಿದ್ದಾನೆ.
ಆತ ಮೃತಪಟ್ಟಿರಬಹುದು ಎಂದು ಭಾವಿಸಿದ ಆರೋಪಿಗಳು ರೈಲ್ವೆ ಹಳಿಯ ಸಮೀಪ ಕಾರು ನಿಲ್ಲಿಸಿ, ಕಾರಿನ ಹಿಂಭಾಗದಲ್ಲಿ ಕುಳಿತು ಮದ್ಯಪಾನ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಪ್ರಜ್ಞೆ ಮರಳಿದ ಮೋಹನ್, ಆರೋಪಿಗಳು ಮದ್ಯಪಾನದಲ್ಲಿ ತೊಡಗಿದ್ದ ಸಮಯವನ್ನು ಬಳಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.
ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ ಮೋಹನ್ ಘಟನೆ ಕುರಿತು ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಮಾಲೀಕ ಶ್ರೀನಿವಾಸ್, ಭುವನ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ. ಹಲ್ಲೆಗೊಳಗಾದ ಮೋಹನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾನೆ.









