ಉಡುಪಿ: ತಿಂಗಳಿಗೊಮ್ಮೆ ಬೆಂಗಳೂರಿನ ಕಚೇರಿಗೆ ಹೋಗಿ ಕೆಲಸ ಮುಗಿಸಿ ಮರಳಿ ಮನೆಗೆ ಬರುತ್ತಿದ್ದ ಯುವಕನ ಬದುಕಿನಲ್ಲಿ ವಿಧಿ ಕ್ರೂರ ಆಟವಾಡಿದೆ.

ಉದ್ಯೋಗದ ನಿಮಿತ್ತ ಬೈಕ್ನಲ್ಲಿ ಬೆಂಗಳೂರಿನತ್ತ ಹೊರಟಿದ್ದ ಬೈಂದೂರಿನ 26 ವರ್ಷದ ಟೆಕ್ಕಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಗನ ಆಗಮನಕ್ಕಾಗಿ ಕಾಯುತ್ತಿದ್ದ ತಂದೆ-ತಾಯಿಗೆ ಇದೀಗ ಮಗನ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ.
ಹೌದು, ಬೈಂದೂರು ತಾಲೂಕಿನ ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್ ಎನ್. ಹೆಬ್ಬಾರ್ (26) ಮೃತಪಟ್ಟ ಯುವಕ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಅಕ್ಷಯ್, ವರ್ಕ್ ಫ್ರಮ್ ಹೋಮ್ ಮೂಲಕ ಕೆಲಸ ಮಾಡುತ್ತಿದ್ದರು. ತಿಂಗಳಿಗೊಮ್ಮೆ ಕಚೇರಿಗೆ ಹೋಗಬೇಕಿದ್ದ ಕಾರಣ ಭಾನುವಾರ ಬೆಳಗಿನ ಜಾವ ಸುಮಾರು 4 ಗಂಟೆಗೆ ಮನೆಯಿಂದ ಬೈಕ್ನಲ್ಲಿ ಬೆಂಗಳೂರಿನತ್ತ ಪ್ರಯಾಣ ಆರಂಭಿಸಿದ್ದರು.
ಪ್ರಯಾಣದ ನಡುವೆ ತಾಯಿಗೆ ದೂರವಾಣಿ ಕರೆ ಕೂಡ ಮಾಡಿದ್ದರು ಎನ್ನಲಾಗಿದೆ. ಆದರೆ, ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ಟ್ರಕ್ಗೆ ಬೈಕ್ನ ಹ್ಯಾಂಡಲ್ ತಾಗಿ, ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಪಘಾತದ ನಿಖರ ಕಾರಣ ಇನ್ನಷ್ಟೇ ಖಚಿತವಾಗಬೇಕಿದೆ.
ಅಕ್ಷಯ್ ತಂದೆ-ತಾಯಿಯ ಏಕೈಕ ಮಗ. ಓದಿನಲ್ಲಿ ಪ್ರತಿಭಾವಂತನಾಗಿದ್ದ ಅವರು ಉತ್ತಮ ಉದ್ಯೋಗ ಪಡೆದು ಕುಟುಂಬದ ಕನಸಿಗೆ ಆಸರೆಯಾಗಿದ್ದರು. ಪ್ರತಿದಿನ ಸಂಜೆ ತಾಯಿಯೊಂದಿಗೆ ಊರಿನ ರಸ್ತೆಯಲ್ಲಿ ವಾಕಿಂಗ್ ಮಾಡುವುದು ಅವರ ದಿನಚರಿಯಾಗಿತ್ತು. ತಂದೆ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡುವುದರ ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ತಾಯಿ ಗೃಹಿಣಿ.
ಕುಟುಂಬದ ಭವಿಷ್ಯದ ಭರವಸೆಯಾಗಿದ್ದ ಮಗನನ್ನು ಕಳೆದುಕೊಂಡ ತಂದೆ-ತಾಯಿಯ ದುಃಖ ಹೇಳತೀರದಾಗಿದೆ. ಅಕ್ಷಯ್ ಅವರ ಅಕಾಲಿಕ ನಿಧನದಿಂದ ಚುಂಗಿಗುಡ್ಡೆ ಹಾಗೂ ಪಡುಕೋಣೆ ಪರಿಸರದಲ್ಲಿ ಶೋಕದ ವಾತಾವರಣ ಆವರಿಸಿದೆ.









