ತುಮಕೂರು: ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಜಿ ಸಚಿವ ಕೆ.ಎನ್. ರಾಜಣ್ಣ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಇಂದಿರಾ ಗಾಂಧಿ ಬಳಿಕ ದೇಶದಲ್ಲಿ ಜನರನ್ನು ಸೆಳೆದ ಅತ್ಯಂತ ದೊಡ್ಡ ಮಾಸ್ ಲೀಡರ್ ಮೋದಿ ಎಂದು ಅವರು ಹೇಳಿದ್ದಾರೆ.
ಮಧುಗಿರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ‘ನಾನು ಮೋದಿಯನ್ನು ಹೊಗಳುತ್ತಿಲ್ಲ. ವಾಸ್ತವವನ್ನು ಹೇಳುತ್ತಿದ್ದೇನೆ. ಇಂದಿರಾ ಗಾಂಧಿಯವರ ನಂತರ ಜನರನ್ನು ಆಕರ್ಷಿಸುವ ನಾಯಕ ಎಂದರೆ ಅದು ನರೇಂದ್ರ ಮೋದಿ’ ಎಂದು ಅಭಿಪ್ರಾಯಪಟ್ಟರು.
ರಾಜಕಾರಣದಲ್ಲಿ ಜನಪ್ರಿಯತೆ ಶಾಶ್ವತವಲ್ಲ ಎಂದು ಎಚ್ಚರಿಸಿದ ಅವರು, ‘ಒಂದು ಕಾಲದಲ್ಲಿ ಇಂದಿರಾ ಗಾಂಧಿಯವರ ಹೆಸರಿನಲ್ಲೇ ನೂರಾರು ಸಂಸದರು ಗೆಲ್ಲುತ್ತಿದ್ದರು. ಆದರೆ ಪರಿಸ್ಥಿತಿ ಬದಲಾಗುತ್ತಿದ್ದಂತೆ ಅವರೂ ಸೋಲು ಕಂಡರು’ ಎಂದು ಹೇಳಿದರು.
‘ನೀವು ಮೋದಿಯನ್ನು ಹೊಗಳುತ್ತಿದ್ದೀರಿ ಅಂತ ನಮ್ಮವರೇ ನನ್ನ ಮೇಲೆ ಕಣ್ಣು ಕೆಂಪಾಗಿಸಬಹುದು. ಆದರೆ ನಾನು ನಿಜವನ್ನು ಹೇಳುತ್ತೇನೆ’ ಎಂದು ರಾಜಣ್ಣ ಪ್ರತಿಕ್ರಿಯಿಸಿದರು.
ಇದೇ ವೇಳೆ ಮೋದಿ ಬಗ್ಗೆ ವ್ಯಂಗ್ಯವಾಡಿದ ಅವರು, ‘ಮೋದಿ ಈಗ ಆಕಾಶದಲ್ಲಿದ್ದಾರೆ. ಭೂಮಿಗೆ ಇಳಿದಾಗ ಕಷ್ಟ-ಸುಖ ಗೊತ್ತಾಗುತ್ತದೆ’ ಎಂದರು.
ರಾಜಣ್ಣ ಅವರ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ಚರ್ಚೆಗೆ ಹೊಸ ತಿರುವು ನೀಡಿದೆ.



