ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರ ಹೆಸರನ್ನು ಎಐಸಿಸಿ ಅಧಿಕೃತವಾಗಿ ಘೋಷಿಸಿದೆ. ಹಲವು ದಿನಗಳ ಲೆಕ್ಕಾಚಾರಗಳು ಹಾಗೂ ಆಂತರಿಕ ಚರ್ಚೆಗಳ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೇರಳ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಹಾಗೂ ರಮೇಶ್ ಚೆನ್ನಿತ್ತಲ ಅವರ ಹೆಸರುಗಳು ಪ್ರಮುಖವಾಗಿ ಚರ್ಚೆಯಲ್ಲಿದ್ದವು. ಆದರೆ ಅಂತಿಮವಾಗಿ ಪಕ್ಷದ ಹೈಕಮಾಂಡ್ ವಿ.ಡಿ. ಸತೀಶನ್ ಅವರನ್ನು ನೂತನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.
ಏಪ್ರಿಲ್ 9ರಂದು ಕೇರಳ ವಿಧಾನಸಭಾ ಚುನಾವಣೆ ನಡೆದಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಟ್ಟು 140 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತು. ಆಡಳಿತಾರೂಢ ಎಲ್ಡಿಎಫ್ ಕೇವಲ 35 ಸ್ಥಾನಗಳಿಗೆ ಸೀಮಿತವಾಗಿ ಹೀನಾಯ ಸೋಲು ಅನುಭವಿಸಿತು. ಆದರೂ ನೂತನ ಸಿಎಂ ಆಯ್ಕೆಗೆ ಕಾಂಗ್ರೆಸ್ ನಾಯಕತ್ವಕ್ಕೆ ಸುಮಾರು 10 ದಿನಗಳ ಕಾಲ ಚರ್ಚೆ ನಡೆಸಬೇಕಾಯಿತು.
ನೂತನ ಮುಖ್ಯಮಂತ್ರಿ ಘೋಷಣೆ ನಂತರ ತಿರುವನಂತಪುರಂನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂತೋಷ ವ್ಯಕ್ತಪಡಿಸಲಾಗಿದೆ.
ಕೇರಳ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ತಿರುವನಂತಪುರಂನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದು ಪಕ್ಷಕ್ಕೆ ಅತ್ಯಂತ ಸರಿಯಾದ ಹಾಗೂ ಒಳ್ಳೆಯ ನಿರ್ಧಾರ ಎಂದು ಹೇಳಿದ್ದಾರೆ.



