ಮುಂಬೈ: ಅಯೋಧ್ಯೆಯಲ್ಲಿ ಭೂಮಿ ಖರೀದಿಸುವ ಸೆಲೆಬ್ರಿಟಿಗಳ ಪಟ್ಟಿಗೆ ಇದೀಗ ಬಾಲಿವುಡ್ ನಟ ರಣಬೀರ್ ಕಪೂರ್ ಕೂಡ ಸೇರಿದ್ದಾರೆ. ಅವರು 3.31 ಕೋಟಿ ರೂಪಾಯಿ ಮೌಲ್ಯದ ಜಾಗವನ್ನು ಸರಯೂ ನದಿ ದಂಡೆಯ ‘ದಿ ಸರಯೂ’ ಯೋಜನೆಯಲ್ಲಿ ಖರೀದಿಸಿದ್ದಾರೆ.
ಈ ಯೋಜನೆಯನ್ನು ‘ದಿ ಹೌಸ್ ಆಫ್ ಅಭಿನಂದನ್ ಲೋಧಾ’ ಸಂಸ್ಥೆ ನಿರ್ಮಿಸುತ್ತಿದ್ದು, 75 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿ ಕ್ಲಬ್‌ಹೌಸ್, ಐಷಾರಾಮಿ ಹೋಟೆಲ್ ಮತ್ತು ಅನೇಕ ಪ್ರೀಮಿಯಂ ಸೌಲಭ್ಯಗಳು ಇರಲಿವೆ.
ಈ ಬಗ್ಗೆ ಮಾತನಾಡಿದ ರಣಬೀರ್ ಕಪೂರ್, “ಅಯೋಧ್ಯೆ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಅವಿಭಾಜ್ಯ ಅಂಗ. ಇಲ್ಲಿ ಜಾಗ ಖರೀದಿಸಿರುವುದು ನನಗೆ ವಿಶೇಷ ಭಾವನೆ ನೀಡಿದೆ” ಎಂದು ಹೇಳಿದ್ದಾರೆ.
ಪ್ರಸ್ತುತ ರಣಬೀರ್ ‘ರಾಮಾಯಣ’ ಸಿನಿಮಾದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿರುವುದು ವಿಶೇಷ.
ಈ ಹಿಂದೆ ಅಮಿತಾಭ್ ಬಚ್ಚನ್ ಕೂಡ ಅಯೋಧ್ಯೆಯಲ್ಲಿ ಹಲವು ಬಾರಿ ಭೂಮಿ ಖರೀದಿಸಿದ್ದರು. ಇದೀಗ ರಣಬೀರ್ ಕೂಡ ಅದೇ ಹಾದಿ ಹಿಡಿದಿರುವುದು ಸಿನಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.



