ಪರವಾನಗಿ ಇಲ್ಲದೆ ಮದ್ಯ ವ್ಯಾಪಾರ : ಗದಗ ಗ್ರಾಮೀಣ ಪೊಲೀಸರ ದಾಳಿ
ಗದಗ: ಜಿಲ್ಲೆಯ ಹೊಂಬಳ ಗ್ರಾಮದಲ್ಲಿ ಮನೆ ಮುಂದೆಯೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ದಂಧೆ ಮೇಲೆ ಗದಗ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಸಾವಿರಾರು ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಮದ್ಯ ಪೂರೈಕೆಯ ಹಿಂದೆ ಬಾರ್ ಸಂಪರ್ಕವಿದೆಯೇ ಎಂಬ ಅನುಮಾನವೂ ಮೂಡಿದ್ದು, ತನಿಖೆ ಚುರುಕುಗೊಂಡಿದೆ.
ಗದಗ ತಾಲೂಕಿನ ಹೊಂಬಳ ಗ್ರಾಮದ ಜನತಾ ಕಾಲೋನಿಯಲ್ಲಿ ಮನೋಹರ ಮಲ್ಲಪ್ಪ ಹರಣಶಿಕಾರಿ ಎಂಬಾತ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ರಾತ್ರಿ ಕಾರ್ಯಾಚರಣೆ ನಡೆಸಿದರು.
ದಾಳಿ ವೇಳೆ ಆರೋಪಿಯ ವಶದಿಂದ 94 “ಒರಿಜಿನಲ್ ಚಾಯ್ಸ್” ವಿಸ್ಕಿ 90 ಎಂ.ಎಲ್ ಟೆಟ್ರಾ ಪ್ಯಾಕೆಟ್‌ಗಳು ಹಾಗೂ 48 “ಒರಿಜಿನಲ್ ಚಾಯ್ಸ್ ಡಿಲಕ್ಸ್” 180 ಎಂ.ಎಲ್ ಟೆಟ್ರಾ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಮದ್ಯದ ಒಟ್ಟು ಮೌಲ್ಯ ₹9,260 ಎಂದು ಅಂದಾಜಿಸಲಾಗಿದೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಆರೋಪಿಯು ಹೆಚ್ಚುವರಿ ಲಾಭದ ಆಸೆಗೆ ಗ್ರಾಮದಲ್ಲೇ ಅಕ್ರಮ ಮದ್ಯ ಮಾರಾಟ ಜಾಲ ನಡೆಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ “ಜೆ.ಕೆ. ಬಾರ್” ಹೆಸರು ಕೇಳಿಬಂದ ಹಿನ್ನೆಲೆ, ಮದ್ಯ ಪೂರೈಕೆ ಯಾವ ಮಾರ್ಗದಿಂದ ನಡೆಯುತ್ತಿತ್ತು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.116/2026ರಂತೆ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಗ್ರಾಮೀಣ ಭಾಗಗಳಲ್ಲಿ ಹೆಚ್ಚುತ್ತಿರುವ ಅಕ್ರಮ ಮದ್ಯ ಮಾರಾಟ ಜಾಲದ ವಿರುದ್ಧ ಪೊಲೀಸ್ ಇಲಾಖೆ ವಿಶೇಷ ನಿಗಾ ವಹಿಸಿದ್ದು, ಇಂತಹ ದಂಧೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಎಚ್ಚರಿಸಿವೆ.



