ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಿಂದ ಬಿಡುಗಡೆಯಾಗಿರುವ ಇಂಗ್ಲೆಂಡ್ನ ಯುವ ಆಲ್ರೌಂಡರ್ ಜೇಕಬ್ ಬೆಥೆಲ್, ಆರ್ಸಿಬಿ ಫ್ರಾಂಚೈಸಿ ಹಾಗೂ ಅಭಿಮಾನಿಗಳಿಗೆ ಭಾವುಕ ವಿದಾಯ ಸಂದೇಶ ನೀಡಿದ್ದಾರೆ. ತಂಡದೊಂದಿಗಿನ ಎರಡು ವರ್ಷಗಳ ಪಯಣವನ್ನು ನೆನಪಿಸಿಕೊಂಡಿರುವ ಬೆಥೆಲ್, ಆರ್ಸಿಬಿ ನೀಡಿದ ಅವಕಾಶ ಹಾಗೂ ಅಭಿಮಾನಿಗಳ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಜೇಕಬ್ ಬೆಥೆಲ್, ಆರ್ಸಿಬಿಯೊಂದಿಗಿನ ತಮ್ಮ ಅನುಭವವನ್ನು ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದೆಂದು ಬಣ್ಣಿಸಿದ್ದಾರೆ. ಮೊದಲ ಐಪಿಎಲ್ ಅನುಭವಕ್ಕೆ ಉತ್ತಮ ಫ್ರಾಂಚೈಸಿ ಸಿಗಲು ಸಾಧ್ಯವಿರಲಿಲ್ಲ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಆರ್ಸಿಬಿಗೆ ಭಾವುಕ ಧನ್ಯವಾದ
ಆರ್ಸಿಬಿ ತಂಡದೊಂದಿಗಿನ ಎರಡು ವರ್ಷಗಳ ಅನುಭವವನ್ನು ನೆನಪಿಸಿಕೊಂಡ ಬೆಥೆಲ್, ಕ್ರಿಕೆಟ್ನ ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ರೂಮ್ ಹಾಗೂ ಮೈದಾನ ಹಂಚಿಕೊಂಡಿದ್ದು ತಮ್ಮ ಪಾಲಿಗೆ ದೊಡ್ಡ ಗೌರವ ಎಂದು ಹೇಳಿದ್ದಾರೆ. ಅಲ್ಲದೆ, ಎರಡು ಟ್ರೋಫಿ ಗೆದ್ದ ಋತುಗಳ ಭಾಗವಾಗಿರುವುದು ತಮ್ಮ ವೃತ್ತಿಜೀವನದ ಅತ್ಯಂತ ಸ್ಮರಣೀಯ ಅನುಭವಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.
ಗಾಯದ ಸಮಸ್ಯೆಯಿಂದ ಈ ಬಾರಿ ಐಪಿಎಲ್ಗೆ ಅಲಭ್ಯ
ದುರದೃಷ್ಟವಶಾತ್, ಈ ಬಾರಿ ಐಪಿಎಲ್ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬೆಥೆಲ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ಅವರು, ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳಲು ಶ್ರಮಿಸುವುದಾಗಿ ಹೇಳಿದ್ದಾರೆ. ತಮ್ಮ ಆರೋಗ್ಯದ ಕಡೆಗೆ ಗಮನಹರಿಸಿ ಮತ್ತೆ ಕ್ರಿಕೆಟ್ಗೆ ಮರಳುವ ಸಿದ್ಧತೆಯಲ್ಲಿದ್ದಾರೆ.
ಅಭಿಮಾನಿಗಳ ಪ್ರೀತಿಗೆ ಮನಸೋತ ಬೆಥೆಲ್
ಭಾರತದಲ್ಲಿದ್ದ ಅವಧಿಯಲ್ಲಿ ತಮ್ಮ ಹಾಗೂ ತಂಡದ ಪಯಣವನ್ನು ವಿಶೇಷವಾಗಿಸಿದ ಆರ್ಸಿಬಿ ಅಭಿಮಾನಿಗಳಿಗೆ ಬೆಥೆಲ್ ಪ್ರೀತಿಯಿಂದ ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳ ಬೆಂಬಲ ಮತ್ತು ಪ್ರೀತಿ ತಮ್ಮ ಪಾಲಿಗೆ ಸದಾ ಸ್ಮರಣೀಯವಾಗಿರಲಿದೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
‘ಆರ್ಸಿಬಿ ಜೆರ್ಸಿಯಲ್ಲಿ ಇದು ನನ್ನ ಅಂತ್ಯವಲ್ಲ, ಆದಷ್ಟು ಬೇಗ ಮತ್ತೆ ಸಿಗೋಣ’ ಎಂಬ ಆಶಯದ ಮಾತುಗಳ ಮೂಲಕ ಬೆಥೆಲ್ ಮತ್ತೆ ಆರ್ಸಿಬಿ ತಂಡಕ್ಕೆ ಮರಳುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಈ ಸಂದೇಶ ಆರ್ಸಿಬಿ ಅಭಿಮಾನಿಗಳಲ್ಲಿ ಮತ್ತೆ ತಂಡದ ಜೆರ್ಸಿಯಲ್ಲಿ ಯುವ ಆಟಗಾರನನ್ನು ನೋಡುವ ನಿರೀಕ್ಷೆ ಮೂಡಿಸಿದೆ.










