ಕಾನ್ ಚಲನಚಿತ್ರೋತ್ಸವವು ಕಳೆದ ಎರಡು ದಶಕಗಳಲ್ಲಿ ಕೇವಲ ಸಿನಿಮಾ ಹಬ್ಬವಾಗಿರದೆ, ಜಾಗತಿಕ ಫ್ಯಾಷನ್ ವೇದಿಕೆಯಾಗಿಯೂ ರೂಪಾಂತರಗೊಂಡಿದೆ. ಈ ವೇದಿಕೆಯಲ್ಲಿ ಭಾರತೀಯ ನಟಿ ಊರ್ವಶಿ ರೌಟೇಲಾ 2025ರಲ್ಲಿ ಧರಿಸಿದ್ದ ಲುಕ್ ಈಗಲೂ ವಿಶ್ವದ ಅತ್ಯಂತ ದುಬಾರಿ ಸೆಲೆಬ್ರಿಟಿ ರೆಡ್ ಕಾರ್ಪೆಟ್ ಅವತಾರಗಳಲ್ಲಿ ಒಂದಾಗಿ ದಾಖಲಾಗಿದೆ.
ಅಂತಾರಾಷ್ಟ್ರೀಯ ವರದಿಗಳ ಪ್ರಕಾರ, ಊರ್ವಶಿ ಅವರ ಸಂಪೂರ್ಣ ಕಾನ್ ಲುಕ್ ಮೌಲ್ಯ ಬರೋಬ್ಬರಿ 155.9 ಮಿಲಿಯನ್ ಡಾಲರ್, ಅಂದರೆ ಸುಮಾರು 1300 ಕೋಟಿ ರೂಪಾಯಿಗೂ ಅಧಿಕವಾಗಿತ್ತು.
ನಟಿ ಧರಿಸಿದ್ದ ಮೈಕಲ್ ಸಿಂಕೋ ವಿನ್ಯಾಸದ ವಿಶೇಷ ಗೌನ್ ಸಂಪೂರ್ಣ ಮೆಕ್ಸಿಕನ್ ಮೊಸಾಯಿಕ್ ಕಲಾಶೈಲಿಯಲ್ಲಿ ರೂಪುಗೊಂಡಿದ್ದು, ಅದರ ಮೌಲ್ಯ ಮಾತ್ರವೇ ಸುಮಾರು 4.8 ಮಿಲಿಯನ್ ಡಾಲರ್ ಎಂದು ಹೇಳಲಾಗಿದೆ. ಇದಲ್ಲದೇ ಅವರು ಕೈಯಲ್ಲಿ ಹಿಡಿದಿದ್ದ ಗಿಳಿ ಆಕಾರದ ಕ್ಲಚ್ ಬೆಲೆ ಸುಮಾರು 41 ಲಕ್ಷ ರೂಪಾಯಿ ಎಂದು ವರದಿಯಾಗಿತ್ತು.
ಆದರೆ ಈ ಲುಕ್‌ನ ಪ್ರಮುಖ ಆಕರ್ಷಣೆಯಾಗಿದ್ದದ್ದು ಅಪರೂಪದ ವಜ್ರಾಭರಣಗಳು. ಮೌಸಾಯೆಫ್ ರೆಡ್ ಡೈಮಂಡ್, ಒಪೆನ್‌ಹೈಮರ್ ಬ್ಲೂ ಡೈಮಂಡ್, ಡ್ರೆಸ್ಡೆನ್ ಗ್ರೀನ್ ಡೈಮಂಡ್ ಹಾಗೂ ಟಿಫಾನಿ ಯೆಲ್ಲೋ ಡೈಮಂಡ್ ಸೇರಿ ಹಲವು ಅಪರೂಪದ ವಜ್ರಗಳನ್ನು ಊರ್ವಶಿ ಧರಿಸಿದ್ದರು. ಈ ಆಭರಣಗಳ ಒಟ್ಟು ಮೌಲ್ಯವೇ 151 ಮಿಲಿಯನ್ ಡಾಲರ್ ಎಂದು ವರದಿಗಳು ತಿಳಿಸಿವೆ.
ಈ ಮೂಲಕ ಕಿಮ್ ಕರ್ದಾಶಿಯಾನ್ ಧರಿಸಿದ್ದ ಮರ್ಲಿನ್ ಮನ್ರೋ ಐಕಾನಿಕ್ ಡ್ರೆಸ್ ದಾಖಲೆಗೂ ಮೀರಿದ ಲುಕ್‌ನಲ್ಲಿ ಊರ್ವಶಿ ಕಾಣಿಸಿಕೊಂಡಿದ್ದರು ಎಂಬ ಚರ್ಚೆ ಅಂತರಾಷ್ಟ್ರೀಯ ಫ್ಯಾಷನ್ ವಲಯದಲ್ಲಿ ಭಾರೀ ಸದ್ದು ಮಾಡಿತ್ತು.



