ಚಿಕ್ಕಬಳ್ಳಾಪುರ: ಬ್ಯಾಂಕಾಕ್ನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಪರೂಪದ ವನ್ಯಜೀವಿಗಳನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಕೆಂಪು ಪಾದದ ಆಮೆಗಳು, ಆಫ್ರಿಕನ್ ಆಮೆಗಳು, ಅರ್ಜೆಂಟಿನಾ ಕಪ್ಪು-ಬಿಳಿ ತೇಗು ಹಾಗೂ ಗೋಲ್ಡೀಸ್ ಮಾರ್ಮೋಸೆಟ್ ಸೇರಿ ಒಟ್ಟು 47 ವನ್ಯಜೀವಿಗಳನ್ನು ಪತ್ತೆಹಚ್ಚಿದ್ದಾರೆ.
ಈ ಸಂಬಂಧ ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಬೆಂಗಳೂರು ಗ್ರಾಮಾಂತರ ಆರ್ಎಫ್ಒ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ತನಿಖೆ ಮುಂದುವರಿದಿದೆ.
ಇದೇ ವೇಳೆ ಮತ್ತೊಂದು ಕಾರ್ಯಾಚರಣೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3.26 ಕೋಟಿ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನೂ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬ್ಯಾಂಕಾಕ್ನಿಂದ ಬಂದ ಇಬ್ಬರು ಪ್ರಯಾಣಿಕರ ಲಗೇಜ್ ತಪಾಸಣೆ ವೇಳೆ 8.5 ಕೆಜಿ ಗಾಂಜಾ ಪತ್ತೆಯಾಗಿದ್ದು, ಅದರ ಮೌಲ್ಯ ಸುಮಾರು 2.98 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮತ್ತೊಬ್ಬ ಪ್ರಯಾಣಿಕನ ಬಳಿ 800 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಅದರ ಮೌಲ್ಯ 28 ಲಕ್ಷ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



