ಶಸ್ತ್ರಚಿಕಿತ್ಸೆಯ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿರುವ ಪವನ್ ಕಲ್ಯಾಣ್ ಕಳೆದ ಕೆಲವು ತಿಂಗಳಿಂದ ಎದುರಿಸಿದ್ದ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಜನಸೇನಾ ಪಕ್ಷದ ಸಭೆಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಕೋವಿಡ್ ನಂತರ ಶ್ವಾಸಕೋಶದ ಸೋಂಕು ಸಂಪೂರ್ಣವಾಗಿ ಗುಣವಾಗಿರಲಿಲ್ಲ ಎಂದು ಹೇಳಿದ್ದಾರೆ.
“ಚುನಾವಣೆಗೆ ಮುನ್ನ ಸುಮಾರು ಒಂದೂವರೆ ವರ್ಷ ಧೂಳಿನಲ್ಲಿ ನಿರಂತರ ಪ್ರಚಾರ ನಡೆಸಿದ್ದರಿಂದ ಸೈನಸ್ನಲ್ಲಿ ಧೂಳು ಗಟ್ಟಿಯಾಗಿ ಜಮೆಯಾಗಿತ್ತು. ಇದರಿಂದ ಎಡಗಣ್ಣಿನ ಬಳಿ ಊತ ಬರುತ್ತಿತ್ತು. ಒಂದು ಹಂತದಲ್ಲಿ ದೃಷ್ಟಿಯೇ ಮಂದವಾಗಿತ್ತು. ಎಡಗಡೆ ಕಣ್ಣು ತಿರುಗಿಸಿದರೆ ಏನೂ ಕಾಣುತ್ತಿರಲಿಲ್ಲ” ಎಂದು ಹೇಳಿದ್ದಾರೆ.
ಆರೋಗ್ಯ ಪರೀಕ್ಷೆಯಲ್ಲಿ ದೇಹದ ಕೆಲ ಮಾಂಸಖಂಡಗಳು ಹರಿದಿರುವುದು ಹಾಗೂ ಕೆಲವು ಮೂಳೆಗಳಲ್ಲಿ ಬಿರುಕುಗಳಿರುವುದೂ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
“ಅಭಿಮಾನಿಗಳು ಪ್ರೀತಿಯಿಂದ ಕೈ ಹಿಡಿದು ಎಳೆಯುತ್ತಾರೆ. ಆದರೆ ಅದರಿಂದ ಎರಡೂ ಭುಜಗಳಲ್ಲಿ ಮಾಂಸಖಂಡಗಳಿಗೆ ಹಾನಿಯಾಗಿದೆ. ನೋವು ಅಸಹನೀಯವಾಗಿತ್ತು” ಎಂದು ಪವನ್ ಹೇಳಿದ್ದಾರೆ.
ವೈದ್ಯರ ಸಲಹೆಯಂತೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಚಿಕಿತ್ಸೆ ಪಡೆದಿದ್ದಾಗಿ ಹೇಳಿದ ಅವರು, “ಸುಮಾರು ಒಂದು ತಿಂಗಳ ಬಳಿಕ ಮತ್ತೆ ಜನರ ಮುಂದೆ ಬಂದಿದ್ದೇನೆ” ಎಂದರು.
ಪ್ರಧಾನಿ Narendra Modi ಸೇರಿದಂತೆ ಹಲವು ಗಣ್ಯರು ಆರೋಗ್ಯ ವಿಚಾರಿಸಿದ್ದನ್ನು ಸ್ಮರಿಸಿದ ಪವನ್, ಈಗ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದು, ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗುವುದಾಗಿ ಘೋಷಿಸಿದ್ದಾರೆ.



