ಬೆಂಗಳೂರು: ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪುರುಷರನ್ನು ಬಲೆಗೆ ಸೆಳೆಯುತ್ತಿದ್ದ ಹನಿಟ್ರ್ಯಾಪ್ ಜಾಲವೊಂದು ಬೆಂಗಳೂರಿನಲ್ಲಿ ಬಯಲಾಗಿದೆ. ಮಹಿಳೆ ಹೆಸರಿನಲ್ಲಿ ಚಾಟಿಂಗ್ ಮಾಡಿ ವ್ಯಕ್ತಿಯನ್ನು ಭೇಟಿ ಮಾಡಲು ಕರೆಸಿಕೊಂಡ ಆರೋಪಿಗಳು ಬಳಿಕ ಚಾಕು ತೋರಿಸಿ ದರೋಡೆ ನಡೆಸಿರುವ ಘಟನೆ ಕೃಷ್ಣರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಖಾಸಗಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಿವೇಕ್ ಮತ್ತು ನಿಖಿಲ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಸಹಚರ ತಲೆಮರೆಸಿಕೊಂಡಿದ್ದಾನೆ.
ಬಿಪಿಒ ಉದ್ಯೋಗಿಯಾಗಿದ್ದ 26 ವರ್ಷದ ವ್ಯಕ್ತಿಯನ್ನು ಆರೋಪಿಗಳು ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯಂತೆ ನಟಿಸಿ ಸಂಪರ್ಕಿಸಿದ್ದರು. ಬಳಿಕ ಕೆ.ಆರ್.ಪುರಂ ಪ್ರದೇಶಕ್ಕೆ ಕರೆಸಿಕೊಂಡು, “ಮಹಿಳಾ ಸ್ನೇಹಿತ ಬರುತ್ತಿದ್ದಾರೆ” ಎಂದು ನಂಬಿಸಿ ಬೈಕ್ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.
ಅಲ್ಲಿ ಚಾಕು ತೋರಿಸಿ ಹಲ್ಲೆ ನಡೆಸಿದ ಆರೋಪಿಗಳು 47 ಗ್ರಾಂ ಚಿನ್ನದ ಸರ ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ, ಮೊಬೈಲ್ ಡೇಟಾ ಹಾಗೂ ಸ್ಥಳೀಯ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖೆಯಲ್ಲಿ ಆರೋಪಿಗಳು ಕದ್ದ ಚಿನ್ನವನ್ನು ಆಭರಣ ಮಳಿಗೆಯಲ್ಲಿ ಅಡವಿಟ್ಟಿರುವುದು ಪತ್ತೆಯಾಗಿದ್ದು, ಪೊಲೀಸರು ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪತ್ತೆಗೆ ವಿಶೇಷ ತಂಡ ಶೋಧ ಮುಂದುವರಿಸಿದೆ.



