ಬೆಂಗಳೂರು: ಕುಟುಂಬದ ವಿವಾದ ಹಾಗೂ ಮಗಳ ಆರೋಪಗಳ ಬಗ್ಗೆ ಹರಿದಾಡುತ್ತಿರುವ ಚರ್ಚೆಗಳ ನಡುವೆ ಶಾಸಕ ಸಿ.ಪಿ. ಯೋಗೇಶ್ವರ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ನನ್ನ ಮಾಜಿ ಪತ್ನಿಯೊಂದಿಗೆ 25 ವರ್ಷಗಳ ಹಿಂದೆಯೇ ವಿಚ್ಛೇದನವಾಗಿದೆ. ಈಗ ಅವರಿಗೂ ನನ್ನ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾತನಾಡಿರುವ ಯೋಗೇಶ್ವರ್, “ಚಕ್ಕರೆ ಗ್ರಾಮದಲ್ಲಿ ನಡೆದ ಊರ ಹಬ್ಬದ ವೇಳೆ ನಮ್ಮ ಮನೆ ಬಳಿ ಬಂದು ವಿಡಿಯೋ ಮಾಡಿ, ಮನೆಯೊಳಗೆ ಬಿಡುತ್ತಿಲ್ಲ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗಿದೆ. ಆದರೆ ಈ ಬಾರಿ ವೈಯಕ್ತಿಕ ಕಾರಣಗಳಿಂದ ಹಬ್ಬವೇ ನಡೆದಿರಲಿಲ್ಲ” ಎಂದು ಹೇಳಿದ್ದಾರೆ.
“ಈ ವಿಚಾರ ಗೊತ್ತಿದ್ದರೂ ನನ್ನ ಮಗಳು ಈ ರೀತಿಯ ನಡೆ ತೋರಿರುವುದು ನೋವು ತಂದಿದೆ. ಸಾರ್ವಜನಿಕ ವಲಯದಲ್ಲಿ ನಾನು ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳದವನಂತೆ ಚಿತ್ರಿಸಲಾಗುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಗಳು ನಿಶಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಯೋಗೇಶ್ವರ್, “ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ರಾಜಕೀಯವಾಗಿ ಕಳಂಕಿತಗೊಳಿಸುವ ಯತ್ನ ನಡೆಯುತ್ತಿದೆ. ಇದರ ಹಿಂದೆ ವಿರೋಧಿಗಳ ಕೈವಾಡವಿದೆಯೇ ಎಂಬ ಅನುಮಾನವೂ ಮೂಡುತ್ತಿದೆ” ಎಂದು ಹೇಳಿದ್ದಾರೆ.
“ನಾನು ನನ್ನ ಮಗಳನ್ನು ಎಂದಿಗೂ ದೂರ ಮಾಡಿಲ್ಲ. ಆದರೆ ನನ್ನ ವಿರುದ್ಧ ನಿರಂತರ ಆರೋಪಗಳು ನಡೆಯುತ್ತಿರುವುದು ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ” ಎಂದು ಯೋಗೇಶ್ವರ್ ಹೇಳಿದ್ದಾರೆ.



