ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದಡಿ ದಾಖಲಾಗಿರುವ ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಎಫ್ಐಆರ್ ರದ್ದುಪಡಿಸುವಂತೆ ಕೋರಿ ಆರೋಪಿ ಸುಹಾಸ್ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಪ್ರಕರಣದ ಕುರಿತು ಮಾಹಿತಿ ಕೇಳಿರುವ ಹೈಕೋರ್ಟ್ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿ ಸಂದೀಪ್ಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಸಂಬಂಧ ಪುನೀತ್, ವೇಣು ಹಾಗೂ ಸುಹಾಸ್ ಅವರನ್ನು ಬಂಧಿಸಿ ತನಿಖೆ ನಡೆಸಲಾಗಿತ್ತು.
ತನಿಖೆಯ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾವಿ ಮಹಿಳೆ, ಕಿರಣ್ ರೆಡ್ಡಿ ಮತ್ತು ಗೌರವ್ ಶೆಟ್ಟಿ ಅವರ ಹೆಸರುಗಳು ಕೂಡ ಪ್ರಸ್ತಾಪಕ್ಕೆ ಬಂದಿದ್ದವು ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆ ಮುಂದುವರಿದಿರುವ ನಡುವೆಯೇ ಆರೋಪಿ ಸುಹಾಸ್, ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸುಹಾಸ್ ಪರವಾಗಿ ವಕೀಲ ಹಷ್ಮತ್ ಪಾಷ ನ್ಯಾಯಾಲಯದಲ್ಲಿ ಹಾಜರಾಗಿದ್ದರು. ಪ್ರಕರಣದ ಕುರಿತು ಸರ್ಕಾರಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ಅವರಿಂದ ಹೆಚ್ಚಿನ ಮಾಹಿತಿ ಕೇಳಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಅರ್ಜಿಯ ವಿಚಾರಣೆಯನ್ನು ಮುಂದಿನ ದಿನಕ್ಕೆ ಮುಂದೂಡಿದೆ.
ಹೀಗಾಗಿ ಸಾಕ್ಷಿಗೆ ಬೆದರಿಕೆ ಪ್ರಕರಣದ ಎಫ್ಐಆರ್ ರದ್ದತಿ ಕುರಿತು ಹೈಕೋರ್ಟ್ನ ಮುಂದಿನ ವಿಚಾರಣೆ ಕುತೂಹಲ ಮೂಡಿಸಿದೆ.



