ಬೆಂಗಳೂರು: ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಪ್ರಯಾಣಿಕನೊಬ್ಬ ಅನುಸರಿಸಿದ್ದ ವಿಚಿತ್ರ ಮಾರ್ಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಯಲಾಗಿದೆ. ದುಬೈನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನ ಬಾಯಿಯಲ್ಲಿ ಬರೋಬ್ಬರಿ 82 ಗ್ರಾಂ ಚಿನ್ನ ಪತ್ತೆಯಾಗಿದ್ದು, CISF ಸಿಬ್ಬಂದಿಯ ಸಮಯೋಚಿತ ಅನುಮಾನದಿಂದ ಕಳ್ಳಸಾಗಣೆ ಪ್ರಯತ್ನ ಬಯಲಾಗಿದೆ.
ಮಹಮ್ಮದ್ ಸಿರಾಜ್ ಎಂಬಾತ ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿದಿದ್ದ. ಬಳಿಕ ಬೆಂಗಳೂರಿನಿಂದ ಗಾಜಿಯಾಬಾದ್‌ಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ. ಈ ವೇಳೆ ವಿಮಾನ ನಿಲ್ದಾಣದಲ್ಲಿದ್ದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗೆ ಆತನ ವರ್ತನೆ ಅನುಮಾನಾಸ್ಪದವಾಗಿ ಕಂಡುಬಂದಿದೆ.
CISF ಸಿಬ್ಬಂದಿ ಆತನನ್ನು ಪರಿಶೀಲಿಸಿದರೂ ಆರಂಭದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ. ಬಳಿಕ ಬಾಯಿಯನ್ನು ಪರಿಶೀಲಿಸಿದಾಗ ಎರಡು ಚಿನ್ನದ ಕ್ಯಾಪ್ಸೂಲ್‌ಗಳು ಪತ್ತೆಯಾಗಿವೆ. ಅವುಗಳಲ್ಲಿ ಒಟ್ಟು 82 ಗ್ರಾಂ ಚಿನ್ನ ಇತ್ತು ಎನ್ನಲಾಗಿದೆ.
ಬಾಡಿ ಸ್ಕ್ಯಾನರ್‌ನಲ್ಲಿ ಚಿನ್ನ ಪತ್ತೆಯಾಗದಂತೆ ಮಾಡಲು ಬಾಯಿಯಲ್ಲಿ ಕ್ಯಾಪ್ಸೂಲ್ ರೂಪದಲ್ಲಿ ಚಿನ್ನವನ್ನು ಅಡಗಿಸಿಕೊಂಡು ಬಂದಿದ್ದ ಎನ್ನಲಾಗಿದೆ. ಆದರೆ CISF ಸಿಬ್ಬಂದಿಯ ಅನುಮಾನದಿಂದಾಗಿ ಕೊನೆಗೂ ಅಕ್ರಮ ಸಾಗಣೆ ಪ್ರಯತ್ನ ಬಯಲಾಗಿದೆ.
ಸದ್ಯ ಮಹಮ್ಮದ್ ಸಿರಾಜ್‌ನನ್ನು ಹೆಚ್ಚಿನ ತನಿಖೆಗಾಗಿ ಕೆಐಎ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಚಿನ್ನದ ಮೂಲವೇನು, ಯಾರಿಗಾಗಿ ಅದನ್ನು ಸಾಗಿಸಲಾಗುತ್ತಿತ್ತು ಹಾಗೂ ಇದರ ಹಿಂದೆ ಮತ್ತಾರಾದರೂ ಇದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



