ವಿಜಯಪುರ: ಭೂತನಾಳ ಕೆರೆಯಲ್ಲಿ ತಾಯಿ ಸೇರಿದಂತೆ ಐವರು ಮಕ್ಕಳ ಮೃತದೇಹ ಪತ್ತೆಯಾದ ಪ್ರಕರಣ ತೀವ್ರ ಕುತೂಹಲ ಮೂಡಿಸಿದ್ದು, ತನಿಖೆಯಲ್ಲಿ ಕೌಟುಂಬಿಕ ಕಲಹದ ಆಯಾಮ ಪ್ರಮುಖವಾಗಿ ಹೊರಹೊಮ್ಮಿದೆ. ಮೃತರನ್ನು ಶೋಭಾ ಜಾಲಗೇರಿ (45), ವಿದ್ಯಾ (16), ಸುವರ್ಣ (14), ಗೌಡೇಶ್ ಉರ್ಫ್ ತಿಪ್ಪರಾಯ (10), ವಿಕಾಸ (5) ಮತ್ತು ಸಾನಿಕಾ (7) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಆಗಸ್ಟ್ 23ರ ರಾತ್ರಿ ಶೋಭಾ ಹಾಗೂ ಪತಿ ಮಲಕಾರಿ ನಡುವೆ ಜಗಳ ನಡೆದಿತ್ತು. ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಪೂಜೆಗೆ ನೈವೇದ್ಯ ಸಿದ್ಧಪಡಿಸುವುದು ಹಾಗೂ ಕೂಲಿ ಕೆಲಸಕ್ಕೆ ತೆರಳಲು ಬುತ್ತಿ ಮಾಡಿಕೊಡುವ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಬಳಿಕ ಶೋಭಾ ಮಕ್ಕಳೊಂದಿಗೆ ಮನೆಯಿಂದ ಹೊರಹೋಗಿದ್ದರು.
ಅವರು ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮಲಕಾರಿ ಗ್ರಾಮ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದ. ಸುಳಿವು ಸಿಗದ ಹಿನ್ನೆಲೆಯಲ್ಲಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದ. ನಂತರ ಭೂತನಾಳ ಕೆರೆಯಲ್ಲಿ ಆರು ಮಂದಿಯ ಶವಗಳು ಪತ್ತೆಯಾಗಿವೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಬಿಎಲ್‌ಡಿಇ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿನ ನಿಖರ ಕಾರಣ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ ಎಂದು ಎಸ್‌ಪಿ ಲಕ್ಷ್ಮಣ ಬಿ. ನಿಂಬರಗಿ ತಿಳಿಸಿದ್ದಾರೆ.
ಇತ್ತ ಶೋಭಾ ಕುಟುಂಬಸ್ಥರು ಮಲಕಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಮದ್ಯಪಾನ ಮಾಡಿ ಹಲ್ಲೆ ನಡೆಸುತ್ತಿದ್ದ ಹಾಗೂ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಶೋಭಾಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಆದರ್ಶ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೌಟುಂಬಿಕ ಕಲಹ ಸೇರಿದಂತೆ ಸಾವಿಗೆ ಕಾರಣವಾಗಬಹುದಾದ ಎಲ್ಲ ಸಾಧ್ಯತೆಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

