ಚಿಕ್ಕಬಳ್ಳಾಪುರ: ಸಾಮೂಹಿಕ ವಿವಾಹದಲ್ಲಿ ನವಜೋಡಿಗಳಿಗೆ ಸೀಮೆ ಹಸುವನ್ನೇ ಉಡುಗೊರೆಯಾಗಿ ನೀಡಿದ ಅಪರೂಪದ ಘಟನೆ ಬಾಗೇಪಲ್ಲಿಯಲ್ಲಿ ನಡೆದಿದೆ. 23ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬರೋಬ್ಬರಿ 106 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಪ್ರತಿ ನವದಂಪತಿಗೂ ಸೀಮೆ ಹಸು ನೀಡಲಾಗಿದೆ.
ಬಾಗೇಪಲ್ಲಿ ತಾಲೂಕಿನ ಗಡಿದಂ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಎಸ್.ಎನ್. ಚಾರಿಟೇಬಲ್ ಟ್ರಸ್ಟ್ ಈ ಸಾಮೂಹಿಕ ವಿವಾಹವನ್ನು ಆಯೋಜಿಸಿತ್ತು. ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ನವದಂಪತಿಗಳಿಗೆ ಸೀಮೆ ಹಸುಗಳನ್ನು ಉಡುಗೊರೆಯಾಗಿ ನೀಡಿದರು. ಜತೆಗೆ 50 ಸಾವಿರ ರೂ. ನಗದು ನೆರವು ನೀಡುವ ಘೋಷಣೆಯೂ ಮಾಡಲಾಗಿದೆ.
ನವದಂಪತಿಗಳ ಹೊಸ ಬದುಕಿಗೆ ಆದಾಯದ ಮೂಲ ಕಲ್ಪಿಸುವ ಉದ್ದೇಶದಿಂದ ಈ ರೀತಿಯ ಉಡುಗೊರೆ ನೀಡಲಾಗಿದೆ. ಸಾಮಾನ್ಯವಾಗಿ ಸಾಮೂಹಿಕ ವಿವಾಹಗಳಲ್ಲಿ ನೀಡುವ ಬಟ್ಟೆ, ಆಭರಣಗಳ ಬದಲಿಗೆ ಜೀವನೋಪಾಯಕ್ಕೆ ನೆರವಾಗುವ ಉಡುಗೊರೆ ನೀಡಿರುವುದು ವಿಶೇಷ ಗಮನ ಸೆಳೆದಿದೆ.
ಇದೇ ವೇಳೆ ಶ್ರೀ ತಿರುಮಲ ತಿರುಪತಿ ದೇವಸ್ಥಾನದ ವತಿಯಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣೋತ್ಸವವೂ ನಡೆಯಿತು. ಕಾರ್ಯಕ್ರಮದಲ್ಲಿ ಸಚಿವ ಕೆ.ಹೆಚ್. ಮುನಿಯಪ್ಪ, ಮಾಜಿ ಸಂಸದ ಡಿ.ಕೆ. ಸುರೇಶ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಮಾಜಿ ಸಚಿವ ಶಿವಶಂಕರ ರೆಡ್ಡಿ, ಮಾಜಿ ಶಾಸಕ ಎನ್. ಸಂಪಂಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
106 ಜೋಡಿಗಳ ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾದ ಬಾಗೇಪಲ್ಲಿಯಲ್ಲಿ, ನವದಂಪತಿಗಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದ ಈ ವಿಭಿನ್ನ ಉಡುಗೊರೆ ಇದೀಗ ವಿಶೇಷ ಚರ್ಚೆಗೆ ಕಾರಣವಾಗಿದೆ.



