ಚಿಕ್ಕಬಳ್ಳಾಪುರ: ಪಾಕಿಸ್ತಾನ ಮೂಲದ ಮಹಿಳೆ ಮತ್ತು ಆಕೆಯ ಪುತ್ರ ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಅಕ್ರಮವಾಗಿ ನೆಲೆಸಿದ್ದ ಪ್ರಕರಣ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಾಗೇಪಲ್ಲಿ ಪೊಲೀಸರು ಫರ್ಹಾನಾಜ್ ಹಾಗೂ ಪುತ್ರ ಮೊಹಮ್ಮದ್ ಫರ್ದೀನ್ ಖಾನ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ತನಿಖೆಯ ವೇಳೆ, ಆರೋಪಿಗಳು ಭಾರತೀಯ ಪೌರತ್ವ ಹೊಂದಿಲ್ಲದಿದ್ದರೂ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ದಾಖಲೆಗಳು ಹೇಗೆ ಸೃಷ್ಟಿಯಾಗಿವೆ ಎಂಬ ಕುರಿತು ತನಿಖೆ ನಡೆಯುತ್ತಿದೆ.
ಫರ್ಹಾನಾಜ್ ಅವರು ಬಾಗೇಪಲ್ಲಿ ತಾಲೂಕಿನ ನಿವಾಸಿ ಅಯೂಬ್ ಖಾನ್ ಅವರನ್ನು ವಿವಾಹವಾಗಿದ್ದು, ಅವರ ಪತಿ ಪ್ರಸ್ತುತ ಕತಾರ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಕುಟುಂಬವು ದಾಸಗಾರೆಪಲ್ಲಿ ಗ್ರಾಮದಲ್ಲೇ ವಾಸಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವೀಸಾ ಅವಧಿ ನವೀಕರಣವಾಗದೇ ಇದ್ದರೂ ಭಾರತದಲ್ಲೇ ಉಳಿದಿರುವ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಅಕ್ರಮ ವಾಸ ಹಾಗೂ ದಾಖಲೆಗಳಿಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ತನಿಖೆಯ ವ್ಯಾಪ್ತಿಗೆ ಒಳಪಡಿಸಿದ್ದಾರೆ.



