ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ತಿಮ್ಮಾಪುರ ಹಾಗೂ ಹರ್ಲಾಪೂರ ಭಾಗದಲ್ಲಿ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆಗಳಿಗೆ ಮುಟುಗಿ ರೋಗ, ಥ್ರಿಪ್ಸ್ ಹಾಗೂ ನುಸಿ ಕೀಟಗಳ ಬಾಧೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಬೆಳೆಗಳನ್ನು ಪರಿಶೀಲಿಸಿದರು.
ಗದಗ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಕರೋಶಿ ಅವರು ರೈತರೊಂದಿಗೆ ಚರ್ಚಿಸಿ ರೋಗ ಹಾಗೂ ಕೀಟಗಳ ಸಮಗ್ರ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಥ್ರಿಪ್ಸ್ ಮತ್ತು ನುಸಿ ಕೀಟಗಳ ನಿಯಂತ್ರಣಕ್ಕೆ ಅಂಟು ಬಲೆ, ಬೇವಿನ ಎಣ್ಣೆ, ಜೈವಿಕ ಕೀಟನಾಶಕ ಹಾಗೂ ಶಿಫಾರಸು ಮಾಡಲಾದ ರಾಸಾಯನಿಕ ಕೀಟನಾಶಕಗಳನ್ನು ನಿಯಮಿತವಾಗಿ ಬದಲಾಯಿಸಿ ಸಿಂಪಡಿಸಬೇಕು. ಔಷಧ ಸಿಂಪಡಿಸುವಾಗ ದ್ರಾವಣವು ಎಲೆಗಳ ಕೆಳಭಾಗಕ್ಕೂ ತಲುಪುವಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಮಳೆ ಕೊರತೆಯಿಂದ ಕೆಲವು ಕಡೆ ಬೆಳೆಗಳು ಮೊಳಕೆ ಹಂತದಲ್ಲೇ ಕಮರಿ ನಾಶವಾಗುತ್ತಿರುವುದನ್ನು ಅಧಿಕಾರಿಗಳು ಪರಿಶೀಲಿಸಿದರು. ಶೀಘ್ರದಲ್ಲಿ ಸಮಗ್ರ ಸಮೀಕ್ಷೆ ನಡೆಸಿ ಬೆಳೆಹಾನಿ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಮಂಜುನಾಥ ಕರೋಶಿ ರೈತರಿಗೆ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮಾತನಾಡಿ, ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿರುವ ಬೆಳೆಗಳು ರೈತರ ಕಣ್ಣೆದುರೇ ನಾಶವಾಗುತ್ತಿವೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ರೈತರಿಗೆ ಪರಿಹಾರ ಹಾಗೂ ಬೆಳೆ ವಿಮೆ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಶಿವಾನಂದ ಬಾನಿ, ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೋಗಿನ, ವೆಂಕಟೇಶ ಸತ್ಯಪ್ಪನವರ, ಕೀರಣ ಜೋಗಿನ, ಫಕೀರಪ್ಪ ಹಂಚಿನಾಳ, ಮುತ್ತಪ್ಪ ಗಾಣದ ಸೇರಿದಂತೆ ರೈತರು ಉಪಸ್ಥಿತರಿದ್ದರು.



