ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ವಕಾರುಸಾಲು ಸೇರಿದಂತೆ ವಿವಿಧ ನಗರಸಭೆ ಆಸ್ತಿಗಳನ್ನು ಪ್ರಾಧಿಕಾರಕ್ಕೆ ಹಸ್ತಾಂತರಿಸಿ, ಅಭಿವೃದ್ಧಿಯ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳಿಗೆ ಅವಕಾಶ ನೀಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪ್ರಮುಖ ಪ್ರದೇಶಗಳಲ್ಲಿರುವ ನಗರಸಭೆ ಆಸ್ತಿಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಪ್ರಾಧಿಕಾರಕ್ಕೆ ನೀಡುವ ಬದಲು ಸ್ಥಳೀಯ ಜನರ ಹಿತಾಸಕ್ತಿಗೆ ಅನುಗುಣವಾಗಿ ಬಳಸಬೇಕು. ನಗರದಲ್ಲಿ ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಇದೆ. ಇಂತಹ ಸಮಸ್ಯೆಗಳು ಬಗೆಹರಿಯದೆ ಇರುವಾಗ ದೊಡ್ಡ ವಾಣಿಜ್ಯ ಕಟ್ಟಡ, ಹೋಟೆಲ್ ಹಾಗೂ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಆದ್ಯತೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಗರಸಭೆಯ ಆಸ್ತಿಗಳು ಸಾರ್ವಜನಿಕರ ಆಸ್ತಿಗಳಾಗಿವೆ. ಅವುಗಳ ಅಭಿವೃದ್ಧಿಯಿಂದ ನಗರಸಭೆಗೆ ಆದಾಯ ಹೆಚ್ಚುವುದರ ಜತೆಗೆ ಸ್ಥಳೀಯರಿಗೆ ಉದ್ಯೋಗ ಹಾಗೂ ವ್ಯಾಪಾರ ಅವಕಾಶಗಳು ಸೃಷ್ಟಿಯಾಗಬೇಕು. ಆದರೆ, ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸಿದರೆ ಸ್ಥಳೀಯ ಸಣ್ಣ ವ್ಯಾಪಾರಿಗಳು, ಮೆಕ್ಯಾನಿಕ್‌ಗಳು, ಗ್ಯಾರೇಜ್ ಮಾಲೀಕರು ಹಾಗೂ ಸಣ್ಣ ಉದ್ಯಮಿಗಳಿಗೆ ತೊಂದರೆಯಾಗಲಿದೆ ಎಂದರು.
ನಗರದಲ್ಲಿ ಸಣ್ಣ ಗ್ಯಾರೇಜ್, ಕಾರ್ ಪೇಂಟಿಂಗ್, ವೆಲ್ಡಿಂಗ್ ಸೇರಿದಂತೆ ವಿವಿಧ ವೃತ್ತಿಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದ ಅನೇಕ ಕುಟುಂಬಗಳನ್ನು ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸ್ಥಳಾಂತರಿಸಿರುವುದು ಸರಿಯಲ್ಲ. ಅಭಿವೃದ್ಧಿ ಕಾಮಗಾರಿಗಳಿಂದ ಸ್ಥಳೀಯರಿಗೆ ಉದ್ಯೋಗ ಹಾಗೂ ವ್ಯಾಪಾರ ಅವಕಾಶಗಳು ದೊರೆಯುವಂತಿರಬೇಕು. ಹೊರಗಿನ ದೊಡ್ಡ ಕಂಪನಿಗಳಿಗೆ ಮಾತ್ರ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಬಾರದು ಎಂದು ಹೇಳಿದರು.
ಗದಗದ ಹತ್ತಿ ವ್ಯಾಪಾರ ಸೇರಿದಂತೆ ಸಾಂಪ್ರದಾಯಿಕ ವಾಣಿಜ್ಯ ಚಟುವಟಿಕೆಗಳಿಗೆ ಐತಿಹಾಸಿಕ ಹಿನ್ನೆಲೆಯಿದೆ. ಸ್ಥಳೀಯ ವ್ಯಾಪಾರ ಮತ್ತು ಉದ್ಯಮಗಳಿಗೆ ಉತ್ತೇಜನ ನೀಡುವ ಬದಲು ಸಾರ್ವಜನಿಕ ಆಸ್ತಿಗಳನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸುವುದು ಗದಗದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ವಿವಿಧ ಕಾಮಗಾರಿಗಳನ್ನು ಕೈಗೊಂಡರೂ ನಗರದ ಮೂಲಭೂತ ಸಮಸ್ಯೆಗಳು ಬಗೆಹರಿದಿಲ್ಲ. ಹೀಗಿರುವಾಗ ಸಾರ್ವಜನಿಕ ಆಸ್ತಿಗಳ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಜನರ ಅಭಿಪ್ರಾಯ ಪಡೆಯಬೇಕು. ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ನಿರ್ಧಾರ ಕೈಗೊಂಡು ಯೋಜನೆ ಮುಂದುವರಿಸಿದರೆ ಜನರನ್ನು ಸಂಘಟಿಸಿ ಹೋರಾಟ ನಡೆಸಲಾಗುವುದು. ಅಗತ್ಯಬಿದ್ದರೆ ಕಾನೂನು ಹೋರಾಟಕ್ಕೂ ಮುಂದಾಗಬೇಕಾಗುತ್ತದೆ ಎಂದು ವೆಂಕನಗೌಡ ಗೋವಿಂದಗೌಡ್ರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಮ್. ಎಸ್. ಪರ್ವತಗೌಡ್ರ, ಬಸವರಾಜ ಅಪ್ಪಣ್ಣವರ ಸೇರಿದಂತೆ ಅನೇಕರಿದ್ದರು.



