ವಿಜಯಸಾಕ್ಷಿ ಸುದ್ದಿ, ಗದಗ: ಕಪ್ಪತ್ತಗಿರಿ ಫೌಂಡೇಶನ್ (ರಿ.) ಕಳಸಾಪೂರ–ಗದಗ ಹಾಗೂ ಕಪ್ಪತ್ತಗಿರಿ ಶಿಕ್ಷಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ 2026-27ನೇ ಸಾಲಿನ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಎರಡು ದಿನಗಳ ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ ಹಾಗೂ ವಿಚಾರ ಸಂಕಿರಣವನ್ನು ಸೆ.20 ಮತ್ತು 21ರಂದು ಗದಗ ನಗರದಲ್ಲಿ ಆಯೋಜಿಸಲಾಗಿದೆ.
ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಜ್ಞಾನ ನೀಡುವುದರ ಜತೆಗೆ ಜೀವನದ ಮೌಲ್ಯಗಳನ್ನು ತಿಳಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಇಂತಹ ನಿಷ್ಠಾವಂತ, ಪ್ರಾಮಾಣಿಕ, ಪ್ರಬುದ್ಧ ಹಾಗೂ ಶೈಕ್ಷಣಿಕ ಪರಿಣಿತಿ ಹೊಂದಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸುವುದು ಫೌಂಡೇಶನ್ನ ಪ್ರಮುಖ ಉದ್ದೇಶವಾಗಿದೆ.
ಈ ಉದ್ದೇಶದಿಂದ ಫೌಂಡೇಶನ್ ಪ್ರತಿವರ್ಷ ಶಿಕ್ಷಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಉತ್ತಮ ಶಿಕ್ಷಕರನ್ನು ಗುರುತಿಸಿ ಅವರ ಸೇವೆಯನ್ನು ಗೌರವಿಸುತ್ತಾ ಬಂದಿದೆ. ಗದಗ ಜಿಲ್ಲೆಯ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ, ನರಗುಂದ, ರೋಣ, ಗಜೇಂದ್ರಗಡ ಹಾಗೂ ಗದಗ ಶಹರ ವ್ಯಾಪ್ತಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕ್ರಿಯಾಶೀಲ ಶಿಕ್ಷಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತಿದೆ.
ವಿಶೇಷವಾಗಿ, ಈ ವರ್ಷ ರಾಜ್ಯದ ಪ್ರತಿ ಜಿಲ್ಲೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಮಹತ್ವದ ಉದ್ದೇಶವನ್ನು ಫೌಂಡೇಶನ್ ಹೊಂದಿದೆ. ಕ್ರಿಯಾಶೀಲ ಹಾಗೂ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಫೌಂಡೇಶನ್ ವತಿಯಿಂದ ಗುರುತಿಸಿ, ಅವರು ಸೇವೆ ಸಲ್ಲಿಸುತ್ತಿರುವ ಶಾಲೆ, ಕಾಲೇಜು ಅಥವಾ ಮನೆ ವಿಳಾಸಕ್ಕೆ ಆಯ್ಕೆ ಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗುತ್ತದೆ.
ಸೆ.20ರಂದು ಭಾನುವಾರ ಹಾಗೂ ಸೆ.21ರಂದು ಸೋಮವಾರ ಎರಡು ದಿನಗಳ ಕಾಲ ಗದಗ ನಗರದಲ್ಲಿ ರಾಜ್ಯ ಮಟ್ಟದ ಶಿಕ್ಷಕರ ಸಮ್ಮೇಳನ ಮತ್ತು ವಿಚಾರ ಸಂಕಿರಣ ನಡೆಯಲಿದೆ ಎಂದು ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಮ. ಇಟಗಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಫೌಂಡೇಶನ್ ಸಂಚಾಲಕರಾದ ರಮೇಶ ನಾಯ್ಕ (ಮೊ. 9686611343), ತೋಟಯ್ಯ ಗುಡ್ಡಿಮಠ (ಮೊ. 9901132516) ಹಾಗೂ ಸಂಸ್ಥಾಪಕ ಅಧ್ಯಕ್ಷೆ ಚಂದ್ರಕಲಾ ಮ. ಇಟಗಿಮಠ (ಮೊ. 7795293736) ಅವರನ್ನು ಸಂಪರ್ಕಿಸಬಹುದು.



